ಶಿಕ್ಷಣದಿಂದ ದೇಶಕ್ಕೆ ಉತ್ತಮ ಭವಿಷ್ಯ

28-SVR-1
Published on

ಸವಣೂರ: ದೇಶದ ಉತ್ತಮ ಭವಿಷ್ಯ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ತಿಳಿಸಿದರು.

ಪಟ್ಟಣದ ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ 2025-26ನೇ ಸಾಲಿನ ಪಠ್ಯೇತರ ಚಟುವಟಿಕೆ ಮತ್ತು ವಿವಿಧ ಘಟಕಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಸಂಪತ್ತು ಆಗಿರುವ ವಿದ್ಯಾರ್ಥಿಗಳನ್ನು ಬೇರೆ ರಾಷ್ಟ್ರಗಳಿಗೆ ಸೋರಿಕೆಯಾಗದಂತೆ ತಡೆಗಟ್ಟಿ, ನಮ್ಮಲ್ಲಿಯೇ ಉಳಿಯುವಂತೆ ಮಾಡಿ ದೇಶದ ಪ್ರಗತಿ ಸಾಧಿಸಬೇಕಿದೆ ಎಂದರು.

ವಿದ್ಯಾರ್ಥಿಗಳ ಕೋರಿಕೆಯಂತೆ ಕಾಲೇಜ್ ಎದುರಿನ ರಸ್ತೆಗೆ ಹಂಪ್ಸ್ ಹಾಕಿಸುವುದು, ಕಾಲೇಜ್ ಸಭಾಂಗಣ, ಕಾಲೇಜ್ ಗ್ರಂಥಾಲಯಕ್ಕೆ ಪುಟ್​ಪಾತ್ ರಸ್ತೆ, ಬಿಸಿಎ ಕೋರ್ಸ್ ಲ್ಯಾಬ್​ಗೆ ಕಂಪ್ಯೂಟರ್ ಪೂರೈಕೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.

ಚಳ್ಳಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕ ಗಂಗಾ ನಾಯ್ಕ ಮಾತನಾಡಿ, ಕೇಳುವ, ಓದುವ ಮತ್ತು ಬರೆಯುವ ಈ ಮೂರು ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಲ್ಲಿ ಮಾತ್ರ ಸಾಧನೆಯ ಹಾದಿ ಸುಗಮವಾಗಲಿದೆ ಎಂದರು.

ಬೆಳ್ಳಾವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಧ್ಯಾಪಕಿ ದಿವ್ಯಶ್ರೀ ಬಿ.ಎನ್. ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾಲೇಜ್ ಪ್ರಾಚಾರ್ಯ ಪ್ರೊ. ಪ್ರವೀಣಮಹಾಬಲೇಶ್ವರ ಆನಂದಕಂದ ಮಾತನಾಡಿದರು.

ಬಿಇಒ ಎಂ.ಎಫ್. ರ್ಬಾ, ಪ್ರಾಧ್ಯಾಪಕರಾದ ಡಾ. ಎಂ.ಎಚ್. ಹೆಬ್ಬಾಳ, ಎಸ್.ಬಿ. ಪ್ರವೀಣಕುಮಾರ, ಚಂದ್ರಕಾಂತ ಶಿರಗುಂಪಿ, ಡಾ. ವಿಶ್ವನಾಥ ಯತ್ನಳ್ಳಿ, ಎಫ್.ಬಿ. ನಾಯ್ಕರ, ಲುಬ್ನಾ ನಾಜ್, ರವಿಶಂಕರ ಗಡಿಯಪ್ಪನವರ, ಪ್ರಿಯದರ್ಶಿನಿ ಪಾಟೀಲ, ಶಂಕರಪ್ಪ ಉಪ್ಪಿನ, ಮಹೇಂದ್ರ ದೊಡ್ಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net