

ಬೆಳಗಾವಿ: ಮಹಾರಾಷ್ಟ್ರದ ಮಾಜಿ ಸಿಎಂ, ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಸಮ್ಮುಖದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿ, ಕನ್ನಡಿಗರನ್ನು ಮತ್ತೆ ಕೆಣಕಿದ್ದಾರೆ.
ನಗರದ ಜ್ಯೋತಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮರಾಠ ಕೋ-ಆಪರೇಟಿವ್ ಬ್ಯಾಂಕ್ನ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಷಣ ಮಾಡುತ್ತಿದ್ದ ವೇಳೆ, ಎಂಇಎಸ್ ಪುಂಡರು ನಾಡವಿರೋಧಿ ಘೋಷಣೆ ಕೂಗಿ ಮತ್ತೆ ಗಡಿವಿವಾದಕ್ಕೆ ತುಪ್ಪ ಸುರಿದಿದ್ದಾರೆ. ಭಾಷಣ ಆರಂಭಿಸುತ್ತಿದ್ದಂತೆಯೇ ಕಾರ್ಯಕರ್ತರು, ಬೆಳಗಾಂವ್, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ರಲಾಚ್ ಪಾಯಜೇ (ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು) ಎಂದು ಮರಾಠಿಯಲ್ಲಿ ಘೊಷಣೆ ಕೂಗಿದ್ದಾರೆ.
ಎಂಇಎಸ್ ಪುಂಡರ ಘೋಷಣೆಗೆ ಕ್ಷಣಕಾಲ ದಂಗಾದ ಕಾರ್ಯಕ್ರಮ ಆಯೋಜಕರು, ಎಂಇಎಸ್ ಕಾರ್ಯಕರ್ತರನ್ನು ಸಮಾರಂಭದಿಂದ ಹೊರಹಾಕುವ ಪ್ರಯತ್ನ ನಡೆಸಿದರಾದರೂ, ಸಾಧ್ಯವಾಗಲಿಲ್ಲ. ಘೋಷಣೆ ವೇಳೆ ಸುಮ್ಮನೆ ನಿಂತಿದ್ದ ಶರದ್ ಪವಾರ್ "ನಾನು ಭಾಷಣ ಆರಂಭಿಸಬಹುದಾ? ನಿಮ್ಮ ಅನುಮತಿ ಪಡೆದು ಭಾಷಣ ಶುರುಮಾಡುತ್ತೇನೆ'' ಎನ್ನುತ್ತ ಮಾತು ಮುಂದುವರಿಸಿದರು. ಎಂಇಎಸ್ ಮುಖಂಡ ದೀಪಕ ದಳವಿ, ಕೃಷ್ಣ ಮಾನಸೆ, ದೀಪಕ ಪವಾರ್ ಇತರರು ಇದ್ದರು.