ಬೆಳಗಾವಿಯಲ್ಲಿ ಶಾಂತಿ ಕದಡಿದ ಕೃತ್ಯದ ಹಿಂದೆ ಸಂಘ-ಸಂಸ್ಥೆ ಕೈವಾಡ ಶಂಕೆ: ಈವರೆಗೆ ಒಟ್ಟು 38 ಜನರ ಬಂಧನ

Araga Gnandra (1) (1)
Published on

ಬೆಳಗಾವಿ: ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಯ ಹಲವೆಡೆ ಮಹಾತ್ಮರ ಪ್ರತಿಮೆಗಳನ್ನು ಭಗ್ನಗೊಳಿಸಿ, ಶಾಂತಿ ಕದಡಿದವರ ವಿರುದ್ಧ ಗೂಂಡಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ 38 ಜನರನ್ನು ಬಂಧಿಸಲಾಗಿದೆ. ಏಕಾಏಕಿ ರಾಜ್ಯದಲ್ಲಿ ಈ ಕೃತ್ಯ ನಡೆದಿರುವ ಹಿಂದೆ ಯಾವುದೋ ಸಂಘ-ಸಂಸ್ಥೆ ಇರುವ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಆನಗೋಳದಲ್ಲಿ ಮರುಸ್ಥಾಪಿಸಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿದುಕೊಟ್ಟವರ ಕುಲದವರೇ ಇಂತಹ ಕೃತ್ಯ ಮಾಡುತ್ತಿದ್ದಾರೆ.‌ ನಾಡಿಗೆ ಬೆಂಕಿ ಹಚ್ಚುವ ಕೆಲಸಕ್ಕೆ ಕೈಹಾಕಿದವರ ಮೇಲೆ ಏನು ಕ್ರಮ‌ ಕೈಗೊಂಡರೂ ಕಡಿಮೆಯೇ. ಬಂಧಿತರನ್ನು ತನಿಖೆಗೊಳಪಡಿಸಿ, ಕಠಿಣ ಕ್ರಮ‌ ಜರುಗಿಸಲಾಗುವುದು ಎಂದರು.

ಸ್ವಾತಂತ್ರ್ಯಕ್ಕೋಸ್ಕರ ಮಹಾತ್ಮರು ಪ್ರಾಣ ತ್ಯಾಗ ಮಾಡಿದ್ದಾರೆ. ಬಸವಣ್ಣ, ರಾಯಣ್ಣ ಹಾಗೂ ಶಿವಾಜಿ ಮೂವರು ಮಹಾತ್ಮರು ದೇಶದ ಯಾವುದೇ ಪ್ರದೇಶ ಹಾಗೂ ಜಾತಿ, ಸಮುದಾಯಕ್ಕೆ ಸೀಮಿತವಾಗಿಲ್ಲ. ಈ ಭಾಗದಲ್ಲಿ ಮರಾಠರು ಹಾಗೂ ಕನ್ನಡಿಗರು ಶಾಂತಿ ಸಹಬಾಳ್ವೆಯಿಂದ ಬದುಕು ಸಾಗಿಸುತ್ತಿದ್ದಾರೆ.‌ ಆದರೆ, ಕೆಲ ದುಷ್ಟರು ಶಾಂತಿ ಕದಡಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.

ಬೆಳಗಾವಿ ಅಧಿವೇಶನದಲ್ಲೇ ಮತಾಂತರ ನಿಷೇಧ ಮಸೂದೆ ಮಂಡಿಸುತ್ತೇವೆ.‌ ಜನತೆ ಪರಸ್ಪರ ಮನಸ್ಸು ಹಾಳು ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು. ಶಾಸಕ ಅಭಯ್ ಪಾಟೀಲ ಇದ್ದರು.‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net