ಕನ್ನಡ ಧ್ವಜಕ್ಕೆ ಬೆಂಕಿ: ಎಂಇಎಸ್‌ ಪುಂಡರಿಗೆ ತಕ್ಕಶಾಸ್ತಿ ಆಗ್ಲೇಬೇಕು ಎಂದ ಕುಮಾರಸ್ವಾಮಿ

hdk
Published on

ಬೆಳಗಾವಿ: ಶಿವಸೇನಾ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾರೆ. ಈ ಅವಮಾನಕರ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕನ್ನಡ ದ್ರೋಹಿಗಳನ್ನು ಹಾಗೆಯೇ ಬಿಟ್ಟರೆ ಕರ್ನಾಟಕ ನಿಮ್ಮನ್ನು ಕ್ಷಮಿಸುವುದಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕ್ರಮ ವಹಿಸಬೇಕು ಹಾಗೂ ಕನ್ನಡಕ್ಕಾಗಿ ಹೋರಾಡಿದವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಮಂಗಳವಾರ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದರು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಬೆಳಗಾವಿಯಲ್ಲಿ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್​) ಹಮ್ಮಿಕೊಂಡಿದ್ದ ಮಹಾಮೇಳಾವ್​ ಸಂದರ್ಭದಲ್ಲಿ ಬೆಳಗಾವಿಯ ಎಂಇಎಸ್​ ಮುಖಂಡ ದೀಪಕ ದಳವಿ ಮುಖಕ್ಕೆ ಕನ್ನಡ ಹೋರಾಟಗಾರು ಮಸಿ ಬಳಿದಿದ್ದರು. ಇದನ್ನು ಖಂಡಿಸಿ ಶಿವಸೇನೆ ಕಾರ್ಯಕರ್ತರು ಕನ್ನಡ ಬಾವುಟ ಸುಟ್ಟಿದ್ದರು. ಈ ಘಟನೆಯನ್ನು ಖಂಡಿಸಿದ ಎಚ್​ಡಿಕೆ, ಎಂಇಎಸ್‌ ಪುಂಡರು ಕನ್ನಡ ಧ್ವಜಕ್ಕೆ ಅಪಮಾನ ಮಾಡಿರುವ ಘಟನೆ ಅತ್ಯಂತ ಹೇಯ. ಧ್ವಜವನ್ನು ಸುಟ್ಟು ವಿಕೃತಿ ಮೆರೆದಿರುವುದು ನೀಚ ಕೃತ್ಯ. ಅಖಂಡ ಕರ್ನಾಟಕದ ಆಸ್ಮಿತೆ ಸಾರುವ ನಮ್ಮ ಧ್ವಜದ ವಿಚಾರದಲ್ಲಿ ಆಗಿರುವ ಅಪಚಾರ ಕ್ಷಮಾರ್ಹವಲ್ಲ ಎಂದಿದ್ದಾರೆ.

ಬಹುಭಾಷಾ ಪ್ರೇಮ, ಸಾಮರಸ್ಯ ಕನ್ನಡಿಗರ ದೌರ್ಬಲ್ಯವಲ್ಲ, ಔದಾರ್ಯ. ಇದನ್ನು ಕಿಡಿಗೇಡಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಈ ಪರಮ ಕಿರಾತಕ ಕೃತ್ಯದ ವಿರುದ್ಧ ರಾಜ್ಯ ಸರ್ಕಾರ ಅತ್ಯಂತ ಕಠಿಣವಾಗಿ ವರ್ತಿಸಬೇಕು. ನಮ್ಮ ಧ್ವಜವನ್ನು ಅಪಮಾನಿಸಿದ ಕನ್ನಡ ದ್ರೋಹಿಗಳಿಗೆ ತಕ್ಕಶಾಸ್ತಿ ಮಾಡಬೇಕು ಎಂದು ಸರಣಿ ಟ್ವೀಟ್​ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net