ಬೆಳಗಾವಿಯಲ್ಲಿ ಕಾಂಗ್ರೆಸ್​ ಪ್ರತಿಭಟನೆ: ಸುವರ್ಣಸೌಧಕ್ಕೆ ಟ್ರ್ಯಾಕ್ಟರ್​ನಲ್ಲೇ ಬಂದ ಕೈ ನಾಯಕರು

congress
Published on

ಬೆಳಗಾವಿ: ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಕಾಂಗ್ರೆಸ್​ ನಾಯಕರ ಟ್ರ್ಯಾಕ್ಟರ್​ ರ್ಯಾಲಿ ಬಿಸಿ ಮುಟ್ಟಿಸಿದೆ.

ಗುರುವಾರ ಸುವರ್ಣಸೌಧಕ್ಕೆ ಟ್ರ್ಯಾಕ್ಟರ್​ನಲ್ಲೇ ಬಂದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಸೇರಿದಂತೆ ಕಾಂಗ್ರೆಸ್​ ನಾಯಕರನ್ನ ದ್ವಾರದಲ್ಲೇ ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಅವರ ನೇತೃತ್ವದಲ್ಲಿ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಬೆಳಗಾವಿ ಗ್ರಾಮೀಣ ಜಿಲ್ಲೆ‌ ಕಾಂಗ್ರೆಸ್ ಕಚೇರಿಯಿಂದ ಸುವರ್ಣಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಾ ಬಂದರು. ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮತ್ತಿತರ ಮುಖಂಡರು ಇದ್ದರು.

ಈ ವೇಳೆ ಕಾಂಗ್ರೆಸ್​ ನಾಯಕರ ವಾಹನಗಳನ್ನು ಪೊಲೀಸರು ತಡೆದರು. ಆಗ ಮತ್ತಷ್ಟು ಗರಂ ಆದ ಕಾಂಗ್ರೆಸ್​ ನಾಯಕರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಗೇಟ್​ ಬಳಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. 40 % ಕಮಿಷನ್ ಪಡೆಯುತ್ತಿದೆ ಎಂದು ಆರೋಪಿಸಿದರು. ಕೊನೆಗೆ ಟ್ರ್ಯಾಕ್ಟರ್ ಮೂಲಕವೇ ಕಾಂಗ್ರೆಸ್ ನಾಯಕರು ಸುವರ್ಣಸೌಧಕ್ಕೆ ಪ್ರವೇಶ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net