ಅಂದಲಗಿಯಲ್ಲಿ ರೈತನ ಮೇಲೆರಗಿದ ಕರಡಿ

MND BEAR
Published on

ಮುಂಡಗೋಡ: ಹೊಲದಿಂದ ಮನೆಗೆ ಮರಳುತ್ತಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತಾಲೂಕಿನ ಅಂದಲಗಿ ಸನಿಹ ಭಾನುವಾರ ಸಂಜೆ ಜರುಗಿದೆ.

ಅಂದಲಗಿ ಗ್ರಾಮದ ದ್ಯಾಮಣ್ಣ ನಾಗಪ್ಪ ಬೆಂಡಿಗೇರಿ ಎಂಬ ರೈತನ ಮೇಲೆ ಕರಡಿ ದಾಳಿ ನಡೆಸಿದೆ. ಹೊಲದಿಂದ ಮನೆಗೆ ತೆರಳುವ ಮಾರ್ಗ ಮಧ್ಯೆ ದಾಳಿ ನಡೆಸಿದ ಕರಡಿ ಕೈ ಕಾಲಿಗೆ ಕಚ್ಚಿದ್ದು, ದೇಹದ ಇತರೆ ಭಾಗಗಳಿಗೆ ಪರಚಿ ಗಾಯಗೊಳಿಸಿದೆ. ರೈತನ ಚೀರಾಟ ಕೇಳಿ ಕರಡಿ ಓಡಿ ಹೋಗಿದೆ. ತಕ್ಷಣವೇ ಗಾಯಾಳು ರೈತನನ್ನು ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚೆಗೆ ದನಗಾಹಿಯೊಬ್ಬನ ಮೇಲೆ ದಾಳಿ ನಡೆಸಿದ್ದ ಕರಡಿ ಇದೀಗ ರೈತರೊಬ್ಬರ ಮೇಲೆ ದಾಳಿ ನಡೆಸಿದೆ. ಕರಡಿ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net