

ಕೊರಟಗೆರೆ: ಮನೆಯಲ್ಲಿ ಕರಡಿ ಮಾಂಸ ಇಟ್ಟುಕೊಂಡಿದ್ದ ಆರೋಪಿ ಸೇರಿದಂತೆ ಈ ಕೃತ್ಯಕ್ಕೆ ಸಹಕರಿಸಿದ 6 ಮಂದಿಯನ್ನು ಬಂಧಿಸಲಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗ ಹೋಬಳಿ ಗೌಜಗಲ್ಲು ಗ್ರಾಮದ ಚಿಕ್ಕಬಸವಯ್ಯ ಎಂಬುವರ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದಾಗ 1 ಕೆಜಿ 50 ಗ್ರಾಂ ತೂಕದಷ್ಟು ಕರಡಿ ಮಾಂಸ ಪತ್ತೆಯಾಗಿದೆ. ಈ ಮಾಂಸ ವನ್ಯಜೀವಿಯದ್ದೇ ಎಂದು ಪತ್ತೆ ಹಚ್ಚಲು ಮನೆ ಸುತ್ತಮುತ್ತ ಕೆಲವು ಸ್ಥಳಗಳನ್ನು ಪರಿಶೀಲಿಸಿದಾಗ ಅದೇ ಗ್ರಾಮದ ಗೋವಿಂದಪ್ಪ ಎಂಬುವರ ಜಮೀನಿನ ಬಂಡೆಮೇಲೆ ಕರಡಿಯನ್ನು ಕತ್ತರಿಸಿ ಮಾಂಸ ಬೇರ್ಪಡಿಸಿರುವುದು ಪತ್ತೆಯಾಗಿದೆ.
ಚಿಕ್ಕಬಸವಯ್ಯ ಎಂಬುವರ ಮೊಬೈಲ್ ಅನ್ನು ಪರಿಶೀಲಿಸಿದಾಗ ಈ ಕೃತ್ಯಕ್ಕೆ ಸಹಕರಿಸಿದ ಐವರ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆ ಚಿಕ್ಕಬಸವಯ್ಯ ಸೇರಿ 6 ಮಂದಿಯನ್ನು ಆರ್ಎಫ್ಒ ಎಚ್.ನಾಗರಾಜು, ಅರಣ್ಯ ರಕ್ಷಕರಾದ ಮಂಜುನಾಥ್. ಕೆ.ಆರ್.ರಘು ಹಾಗೂ ಸಿಬ್ಬಂದಿ ನೇತೃತ್ವದ ತಂಡ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.