

ವಿಜಯವಾಣಿ ಸುದ್ದಿಜಾಲ ಧಾರವಾಡ
ಸದನದಲ್ಲಿ ಎಚ್.ಕೆ. ಪಾಟೀಲ ಸಂಪುಟ ಕೃತಿ ಮಾತ್ರವಲ್ಲದೆ, ಎಚ್.ಕೆ. ಪಾಟೀಲ ದೀರ್ಘ ಕಾಲದ ರಾಜಕೀಯದ ಪ್ರರಿಶ್ರಮ, ತ್ಯಾಗ ಮತ್ತು ತಾಳ್ಮೆಯ ಸಂಕೇತವಾಗಿದೆ. ಈ ಮಟ್ಟಕ್ಕೆ ಅವರು ಬೆಳೆಯಲು ತಾಳ್ಮೆ, ಸಹನೆಯೇ ಮುಖ್ಯ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಸದನದಲ್ಲಿ ಎಚ್.ಕೆ. ಪಾಟೀಲ’ 5 ಸಂಪುಟಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಎಚ್.ಕೆ. ಪಾಟೀಲರು ಸದನದಲ್ಲಿ ಮಾಡಿದ ಭಾಷಣ, ಮಂಡಿಸಿದ ವಿಚಾರಗಳನ್ನು ಸಮಾಜಕ್ಕೆ ಅರ್ಪಿಸುವ ಕೆಲಸ ಇದಾಗಿದೆ. ಅತ್ಯುನ್ನತ ಜನಪ್ರತಿನಿಧಿ ಸಿಕ್ಕಾಗಲೇ ಸಮಾಜ ಸುಧಾರಣೆ ಆಗಲಿದೆ ಎಂಬ ಕಾರಣಕ್ಕೆ ಪ್ರತಿಯೊಬ್ಬರೂ ಉತ್ತಮ ಜನಪ್ರತಿನಿಧಿಯನ್ನು ಬಯಸುತ್ತಾರೆ. ಅಂತಹ ಸಜ್ಜನ ರಾಜಕಾರಣಿ ಎಚ್.ಕೆ. ಪಾಟೀಲರಾಗಿದ್ದಾರೆ. ಈ ಸಂಪುಟಗಳು ಇಂದಿನ ಯುವಕರು ಸೇರಿ ರಾಜಕಾರಣಿಗಳಿಗೂ ಪ್ರಯೋಜನವಾಗಿದೆ ಎಂದರು.
ಮಾಜಿ ಸಭಾಪತಿ ವಿ.ಆರ್. ಸುದರ್ಶನ ಮಾತನಾಡಿ, ಜಿಲ್ಲೆಗೊಂದು ವಿವಿ ಮಾಡುವ ಕುರಿತು ಸರ್ಕಾರ ಮತ್ತೊಮ್ಮೆ ಪರಿಶೀಲಿಸಬೇಕು. ಜಿಲ್ಲೆಗೊಂದು ವಿವಿ ಮಾಡಿದರೆ ಗುಣಮಟ್ಟ ಉಳಿಯುವುದಿಲ್ಲ. ಹೀಗಾಗಿ ಪುನರ್ ಪರಿಶೀಲನೆ ಮಾಡಬೇಕು. ಚುನಾವಣಾ ವ್ಯವಸ್ಥೆ ಸಹ ಸುಧಾರಣೆ ಆಗಬೇಕು. ವಿಧಾನ ಪರಿಷತ್ ರಾಜ್ಯದಲ್ಲಿ ಮಾತ್ರ ಇದೆ. ಇದಕ್ಕೆ ಕೇಂದ್ರ ಸರ್ಕಾರ ಒಂದು ರಾಷ್ಟ್ರೀಯ ನೀತಿ ರೂಪಿಸಬೇಕು. ಇದಲ್ಲದೆ ವಿಧಾನಸಭೆ ಕ್ಷೇತ್ರಗಳ ಬದಲಾವಣೆ ಆಗಾಗ ಆಗುತ್ತದೆ. ಆದರೆ ಪರಿಷತ್‌ನಲ್ಲಿ ಇದಾಗುತ್ತಿಲ್ಲ. ಈ ಕುರಿತು ಸಹ ಕೇಂದ್ರ ಸರ್ಕಾರ ಗಮನಿಸಬೇಕು ಎಂದರು.
ಎಚ್.ಕೆ. ಪಾಟೀಲ ನೀರಾವರಿ ಸಚಿವರಾದಾಗ ಅನೇಕ ಉತ್ತಮ ಯೋಜನೆ ತಂದು ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಎಲ್ಲೆ ಅನ್ಯಾಯ ಆಗಿದ್ದರೂ ಅದರ ವಿರುದ್ಧ ಧ್ವನಿ ಎತ್ತಿ ಸಮಸ್ಯೆ ಪರಿಹರಿಸಿದ್ದಾರೆ. ಒಂದು ರೀತಿ ಉತ್ತರ ಕರ್ನಾಟಕದ ಧ್ವನಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ವಿಪಕ್ಷ ನಾಯಕರಾಗಿದ್ದಾಗ ತಮ್ಮ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪರಿಚಯಿಸಿದರು. ಇದೀಗ ಎಲ್ಲ ಗ್ರಾಮಗಳಲ್ಲಿ ಘಟಕಗಳು ಬಂದಿವೆ. ಇದಕ್ಕೆ ಪಾಟೀಲರು ಕಾರಣ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಎಚ್.ಕೆ. ಪಾಟೀಲ ಕಾರ್ಯ ಸ್ಮರಣೀಯ. ಸಹಕಾರಿ, ನೀರಾವರಿ, ಗ್ರಾಮೀಣಾಭಿವೃದ್ಧಿ ಸೇರಿ ಅನೇಕ ಕ್ಷೇತ್ರಗಳಲ್ಲಿ ಅನೇಕ ಕೊಡುಗೆ ನೀಡಿದ್ದಾರೆ. ಸಂಪುಟಗಳು ಯುವ ಪೀಳಿಗೆಗೆ ಮಾದರಿಯಾಗಲಿ. ಎಚ್.ಕೆ. ಪಾಟೀಲರು ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ. ತಾಳ್ಮೆ, ಸಹನೆ ಇದೆ. ಅವರಿಂದ ಯುವ ಪೀಳಿಗೆ ಕಲಿಯುವುದು ಸಾಕಷ್ಟಿದೆ. ಪಾಟೀಲರಿಗೆ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ ಎಂದರು.
ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿದರು. ಸಚಿವ ಎಚ್.ಕೆ. ಪಾಟೀಲ, ಶಾಸಕ ಎನ್.ಎಚ್. ಕೋನರಡ್ಡಿ, ವಿವಿಧ ಕ್ಷೇತ್ರಗಳ ಶಾಸಕರು, ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಕೃವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ, ಕಾ.ತ. ಚಿಕ್ಕಣ್ಣ, ನೂರಹ್ಮದ್ ಮಕಾನದಾರ, ಡಾ. ರೇವಯ್ಯ ಒಡೆಯರ್, ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ, ಇತರರು ಇದ್ದರು.
ಪ್ರೊ. ತೇಜಸ್ವಿ ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.