

ಬೆಂಗಳೂರು: ಥಣಿಸಂದ್ರ ರೈಲ್ವೆ ಮೇಲ್ಸೇತುವೆ ಬಳಿ ಬಿಬಿಎಂಪಿ ಕಸದ ಲಾರಿಗೆ ಶನಿವಾರ ಸಂಜೆ ಸ್ವಿಗ್ಗಿ ಡೆಲಿವರಿ ಬಾಯ್ ದೇವಣ್ಣ ಬಲಿಯಾದ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ಟ್ರಾಫಿಕ್ ಮ್ಯಾನೇಜ್ಮೆಂಟ್ ಕೇಂದ್ರದಲ್ಲಿ ಕಸದ ಲಾರಿ ಚಾಲಕರಿಗೆ ತರಬೇತಿ ನೀಡುತ್ತಿದ್ದಾರೆ.
2 ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದ ಕಸದ ಲಾರಿ: ಕಳೆದ ಎರಡು ತಿಂಗಳಲ್ಲಿ ಬಿಬಿಎಂಪಿ ಕಸದ ಲಾರಿಗೆ ನಾಲ್ವರು ಬಲಿಯಾಗಿದ್ದಾರೆ. ಮಾ.21ರಂದು ಹೆಬ್ಬಾಳದ ಬಳಿ ಬಿಬಿಎಂಪಿ ಕಸದ ಲಾರಿ ಹರಿದು ಅಯಾ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಳು. ಮಾ.31ರಂದು ಬಾಗಲೂರು ಥಣಿಸಂದ್ರ ಮುಖ್ಯ ರಸ್ತೆಯಲ್ಲಿ ರಾಮಯ್ಯ ಎಂಬುವವರ ಮೇಲೆ ಕಸದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದರು. ಏ.18ರಂದು ನಾಯಂಡಹಳ್ಳಿ ಜಂಕ್ಷನ್ ಬಳಿ ಬ್ಯಾಂಕ್ ಉದ್ಯೋಗಿ ಪದ್ಮಿನಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಬಿಬಿಎಂಪಿ ಕಸದ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೇ 14ರಂದು ಯಾದಗಿರಿ ಜಿಲ್ಲೆ ಸುರಪುರ ಮೂಲದ ಕೊತ್ತನೂರು ನಿವಾಸಿ, ಬೆಂಗಳೂರಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಯುವಕ ದೇವಣ್ಣ, ನಾಗವಾರದಿಂದ ಹೆಗಡೆನಗರದ ಕಡೆಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ದೇವಣ್ಣ ಮೃತಪಟ್ಟರು.
ನಗರದಲ್ಲಿ ಪದೇಪದೆ ಬಿಬಿಎಂಪಿ ಕಸದ ವಾಹನ ಅಪಘಾತ ಸಂಭವಿಸುತ್ತಿದ್ದು, ಎರಡು ತಿಂಗಳಲ್ಲಿ ನಾಲ್ವರು ಬಲಿಯಾಗಿದ್ದಾರೆ. ಚಾಲಕರ ನಿರ್ಲಕ್ಷ್ಯ, ಅಜಾಗರೂಕತೆ, ಅತಿವೇಗದ ಚಾಲನೆ ಎದ್ದು ಕಾಣುತ್ತಿದೆ. ಈ ಹಿನ್ನೆಲೆ ರಸ್ತೆ ಸುರಕ್ಷತಾ ನಿಯಮ, ಚಾಲನೆ ವೇಗದ ಮಿತಿ, ನಗರದಲ್ಲಿ ಹೇಗೆ ದೊಡ್ಡ ವಾಹನ ಚಲಾಯಿಸಬೇಕು? ಎಂಬುದರ ಬಗ್ಗೆ ಸುಮಾರು 588 ಚಾಲಕರಿಗೆ ಬಿಬಿಎಂಪಿ ಮತ್ತು ಟ್ರಾಫಿಕ್ ಪೊಲೀಸರು ತರಬೇತಿ ನೀಡುತ್ತಿದ್ದಾರೆ. ಅಲ್ಲದೆ ಚಾಲಕರ ವಾಹನ ಚಾಲನಾ ಪರವಾನಗಿ, ದೈಹಿಕ ಪರೀಕ್ಷೆ, ಎಲ್ಲ ಕಸದ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ತಪಾಸಣೆ ಹಾಗೂ ಇತರ ತಪಾಸಣೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಪ್ರತಿ ದಿನ 25 ಜನರನ್ನ ರಸ್ತೆ ಸುರಕ್ಷತಾ ತರಬೇತಿ ಕೇಂದ್ರಕ್ಕೆ ಕರೆಸಿ ತರಗತಿ ನೀಡಲಾಗುತ್ತಿದೆ.