

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬರುತ್ತಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಸಾಕ್ಷಿ, ಆಧಾರಗಳಿದ್ದರೆ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷಗಳು ಅನುದಾನದ ವಿಷಯವಾಗಿ ಮಾಡುತ್ತಿರುವ ಆರೋಪ ಆಧಾರ ರಹಿತವಾಗಿವೆ. ಈಗಾಗಲೇ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಹೊಸ ಹೊಸ ಕಾರ್ಯಕ್ರಮಗಳೂ ನಡೆಯುತ್ತಿವೆ. ಕೆಲಸಗಳಿಗೆ ಹಂತ ಹಂತವಾಗಿ ಅನುದಾನವೂ ಬರುತ್ತದೆ ಎಂದರು.
ಶನಿವಾರ ಧಾರವಾಡ ಜಿಲ್ಲೆಗೆ ಕೇಂದ್ರದ ಬರ ಅಧ್ಯಯನ ತಂಡ ಆಗುಮಿಸುತ್ತಿದೆ. ಹಸಿರು ಬರ ಮಾಡಬೇಕೆಂಬ ಆಗ್ರಹ ನಮ್ಮದಾಗಿದೆ. ಕಲಘಟಗಿ, ಅಣ್ಣಿಗೇರಿ, ಅಳ್ನಾವರ ಭಾಗದಲ್ಲೂ ಬರ ಇದೆ. ಆದರೆ ಮೇಲ್ನೋಟಕ್ಕೆ ಹಸಿರು ಕಾಣುತ್ತಿದೆ. ಹೀಗಾಗಿ ಹಸಿರು ಬರ ಘೋಷಣೆಗೆ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಲಾಗಿದೆ ಎಂದ ಸಚಿವರು, ಹಸಿರು ಕಂಡ ತಕ್ಷಣ ಎಲ್ಲವೂ ಚೆನ್ನಾಗಿದೆ ಎಂದಲ್ಲ. ಸೆಟಲೈಟ್‌ನಲ್ಲಿ ನೋಡಿದಾಗ ಹೊಲಗಳಲ್ಲಿ ಹಸಿರು ಬೆಳೆ ಕಾಣುತ್ತದೆ. ಆದರೆ, ಎಲ್ಲ ಬೆಳೆ ಹಾಳಾಗಿ ಹೋಗಿದೆ ಎಂದರು.
ಹಳೇ ಹುಬ್ಬಳ್ಳಿ ಗಲಭೆಗಳ ಕೇಸ್ ವಾಪಸ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರವನ್ನು ಡಿ.ಕೆ. ಶಿವಕುಮಾರ ಅವರಿಗೆ ಕೇಳಬೇಕು. ಎಲ್ಲರಿಗೂ ಒಂದೇ ಕಾನೂನು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎಂದರು.