

ನಾಪೋಕ್ಲು: ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು… ರಸ್ತೆ ವಿಸ್ತರಣೆಗೆ ಕೂಡಲೇ ಕ್ರಮ ಕೈಗೊಳ ್ಳಬೇಕು….ಸಾರ್ವಜನಿಕರಿಗೆ ದೊರಕದ ಶುದ್ಧ ಕುಡಿವ ನೀರು…ಸಮಸ್ಯೆ ಉಂಟುಮಾಡುತ್ತಿರುವ ಬೀದಿ ನಾಯಿ ಮತ್ತು ಜಾನುವಾರುಗಳು…
ಇಲ್ಲಿನ ಸ್ಥಳೀಯ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಒತ್ತಾಯಗಳಿವು. ಕುಡಿಯುವ ನೀರಿನ ಶುದ್ಧೀಕರಣ ಘಟಕ ಸ್ಥಾಪನೆ ಕೆಲಸ ಪ್ರಾರಂಭವಾಗಿ ಹತ್ತು ವರ್ಷಗಳಾಗಿದ್ದರೂ ಜನರಿಗೆ ನೀರು ಸಾರ್ವಜನಿಕರಿಗೆ ದೊರಕುತ್ತಿಲ್ಲ. ಕಾವೇರಿ ಹೊಳೆಯಿಂದ ನೇರವಾಗಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೆ ಈ ಹಿಂದಿನಂತೆ ಜಾನುವಾರಗಳನ್ನು ದೊಡ್ಡಿಗೆ ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯುತ್ ಸಮಸ್ಯೆ ಅಧಿಕವಾಗುತ್ತಿದ್ದು, ಕೂಡಲೇ ವಿದ್ಯುತ್ ಸ್ಟೇಷನ್‌ಗೆ ಜಾಗ ಗುರುತಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಅಲ್ಲದೆ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸವಾಗುತ್ತಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದವರು ಆರೋಪಿಸಿದರು.
ಪಂಚಾಯತಿ ಸದಸ್ಯರೇ ಸಭೆಗೆ ಹಾಜರಾಗಿಲ್ಲ. ಸರಿಯಾದ ಮಾಹಿತಿ ಇಲ್ಲದ ಕಾರಣ 17 ಸಾರ್ವಜನಿಕರು ಮಾತ್ರ ಆಗಮಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿದ್ದಾಟಂಡನ ರೋಜಿ ಚಿನ್ನಪ್ಪ ಆರೋಪಿಸಿದರು. ಗ್ರಾಮ ಪಂಚಾಯತಿಗೆ ಇಚ್ಛಾಶಕ್ತಿ ಇಲ್ಲದ ಕಾರಣ ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಎಂದು ರೋಜಿ ಚಿನ್ನಪ್ಪ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಸಭೆಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಬರಬೇಕಿತ್ತು. ನಮ್ಮ ಸಮಸ್ಯೆ ಪರಿಹರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಬಂದಿಲ್ಲ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ದಯವಿಟ್ಟು ನೋಟಿಸ್ ಕಳುಹಿಸಿ ಕ್ರಮ ಕೈಗೊಳ್ಳಬೇಕು ಎಂದು ಅಂಗನವಾಡಿ ಶಿಕ್ಷಕಿ ಆಶಾಲತಾ ಒತ್ತಾಯಿಸಿದ್ದು ವಿಶೇಷವಾಗಿತ್ತು.
ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಮಡಿಕೇರಿ ತಾಲೂಕು ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ ಪಾಲ್ಗೊಂಡಿದ್ದರು. ಪಿಡಿಒ ಚೋದಕ್ಕಿ, ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ, ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮಸ್ಥರಾದ ಕೊಂಡಿರ ನಾಣಯ್ಯ, ಶಿವಚಳಿಯಂಡ ಅಂಬಿ ಕಾರ್ಯಪ್ಪ, ಕುಂಡ್ಯೋಳಂಡ ವಿಶುಪುವಯ್ಯ, ಕೆಟೋಳಿರ ಡಾಲಿ ಅಪ್ಪಚ್ಚ, ಕಲಿಯಂಡ ಹ್ಯಾರಿ ಮಂದಣ್ಣ ಸೇರಿದಂತೆ ಇತರರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸಲಹೆ ಸೂಚನೆಗಳನ್ನು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು.
ಪಂಚಾಯಿತಿ ಉಪಾಧ್ಯಕ್ಷ ಕುಲ್ಲೇಟಿರ ಹೇಮಾ ಅರುಣ್ ಸೇರಿದಂತೆ ಹಲವರು ಹಾಜರಿದ್ದರು.