ಚಳ್ಳಕೆರೆಯಲ್ಲಿ ಸಮಸ್ಯೆಗಳ ಸುರಿಮಳೆ

CLK NAGARASABHE 28 (2)
Published on

ಚಳ್ಳಕೆರೆ: ಇ-ಸ್ವತ್ತು ಪಡೆದುಕೊಳ್ಳಲು ಅಲೆದಾಟ ನಡೆಸಿದ ಫಲಾನುಭವಿಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಉಳಿದವರು ಸಾಯುವ ಮೊದಲಾದ್ರೂ ಕೆಲಸ ಮಾಡಿಸಿಕೊಡಿ ಸ್ವಾಮಿ…

ಖಾತೆ ಮಾಡಿಸಿಕೊಳ್ಳಲು ನೀಡಿದ ದಾಖಲೆಗಳನ್ನೇ ಕಳೆದು ಪದೇ ಪದೆ ಸತಾಯಿಸುತ್ತಾರೆ. ಲಂಚ ಅಥವಾ ಮಧ್ಯವರ್ತಿ ಮೂಲಕ ಹೋದವರಿಗೆ ಕೆಲಸ ಸುಲಭ ಆಗಲಿದೆ. ನಮ್ಮಂತಹ ಬಡವರ ಪಾಡು ಹೇಳತೀರದು ಸರ್…

ಶಾಸಕ ಟಿ.ರಘುಮೂರ್ತಿ ಆಧ್ಯಕ್ಷತೆಯಲ್ಲಿ ನಗರಸಭೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕುಂದು-ಕೊರತೆ ಸಭೆಯಲ್ಲಿ ಹತ್ತಾರು ಮಂದಿ ಅಳಲು ಜತೆಗೆ ನಗರಸಭೆ ಆಡಳಿತದ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೀತಿ ಇದು.

ಜನರ ಸಮಸ್ಯೆಗಳನ್ನು ಆಲಿಸುತಿದ್ದಂತೆ ಅಧಿಕಾರಿಗಳತ್ತ ನೋಡಿ ಕೆಂಡಾಮಂಡಲವಾದ ಶಾಸಕ ರಘುಮೂರ್ತಿ, ಸಂಬಂಧಿಸಿದವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಮಧ್ಯಪ್ರವೇಶಿಸಿದ ಪೌರಾಯುಕ್ತ ಸಿ.ಚಂದ್ರಪ್ಪ, ಸರ್ ನಾನು ಈಗಷ್ಟೇ ಚಾರ್ಜ್ ತೆಗೆದುಕೊಂಡಿದ್ದೆನೆ. ಇಲ್ಲಿಯವರೆಗೂ ನನ್ನ ಕಡೆ ಬಂದ ಯಾವುದೇ ಫೈಲ್‌ಗಳನ್ನು ಪೂರ್ಣಗೊಳಿಸಿದ್ದೆನೆ. ಇನ್ನು ಕೆಲ ಕಡತ ಕೈಗೆ ಸಿಕ್ಕಿಲ್ಲ ಎಂದರು.

ಕೆಲ ಸಿಬ್ಬಂದಿ ಸರ್ ಇನ್ನೂ ಮೂರು ದಿನದೊಳಗೆ ಬಾಕಿ ಫೈಲ್‌ಗಳನ್ನು ಪರಿಶೀಲಿಸಿ ಪೂರ್ಣಗೊಳಿಸುತ್ತೆವೆ ಎಂದು ಉತ್ತರಿಸಿದರು.

ಇದರಿಂದ ಇನ್ನೂ ಹೆಚ್ಚು ಸಿಟ್ಟಿಗೆದ್ದ ಶಾಸಕರು, ನಗರಸಭೆಯಲ್ಲಿ ಯಾರ‌್ಯಾರು ಎಷ್ಟೆಷ್ಟು ವರ್ಷ ಇಲ್ಲೆ ನೆಲೆಯೂರಿದ್ದಿರಾ ಎಂಬುದು ನನಗೆ ಗೊತ್ತು. ನೀವುಗಳು ಈ ಕೂಡಲೇ ಸೇವಾ ಅವಧಿ ವಿವರವನ್ನು ಪೌರಾಯುಕ್ತರಿಗೆ ನೀಡಬೇಕು. ಬಹಳಷ್ಟು ವರ್ಷ ಇಲ್ಲೇ ಇರುವ, ಕೆಲಸದಲ್ಲಿ ಅಸಡ್ಡೆ ತೋರುವವರನ್ನು ವರ್ಗಾವಣೆ ಮಾಡುವಂತೆ ಜಿಲ್ಲಾಧಿಕಾರಿಗೆ ತಿಳಿಸುವುದಾಗಿ ಹೇಳಿದರು.

ಪೌರಾಯುಕ್ತ ಚಂದ್ರಪ್ಪ ಮೇಲೆ ಹರಿಹಾಯ್ದ ಶಾಸಕರು, ಈಗಾಗಲೇ ಎರಡನೇ ಬಾರಿಗೆ ನೀವು ಇಲ್ಲಿಗೆ ಬಂದಿದ್ದೀರಿ. ಸಾರ್ವಜನಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅರ್ಜಿಗಳನ್ನು ತ್ವರಿತ ವಿಲೇವಾರಿ ಆಗಬೇಕು. ಇ-ಸ್ವತ್ತು ಮತ್ತು ಖಾತೆ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಕಾಲ ಅವಧಿ ಒಳಗೆ ಸಾರ್ವಜನಿಕರ ಕೆಲಸಗಳಾಗಬೇಕು. ಪ್ರತಿ ತಿಂಗಳು ನಾಲ್ಕನೇ ವಾರ ಕುಂದು-ಕೊರತೆ ಸಭೆ ನಡೆಸುವುದು ಖಚಿತ. ಇನ್ನೊಮ್ಮೆ ಇಂತಹ ಸಮಸ್ಯೆಗಳು ನನ್ನ ಕಿವಿಗೆ ಬಿದ್ದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಆಡಳಿತದಲ್ಲಿ ಪಾರದರ್ಶಕತೆ ಇರಬೇಕು. ಕೆಲ ವಾರ್ಡ್‌ಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಮತ್ತು ವಸತಿ ನಿರ್ಮಾಣ ಕಾಮಗಾರಿ ಸೇರಿ ರೈಲ್ವೆ ನಿಲ್ದಾಣ ಸಮೀಪದ ಸ್ಮಶಾನ ಭೂಮಿ, ಪಾರ್ಕ್ ಮತ್ತು ಶಾಲಾ ಮೈದಾನಗಳ ಒತ್ತುವರಿ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

ರಾಜ್ಯ ರೈತಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ರಸ್ತೆ ಬದಿ ವ್ಯಾಪಾರಸ್ಥರನ್ನು ಕರ ವಸೂಲಿಗಾರರು ಸುಲಿಗೆ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರು ಬುಟ್ಟಿಯಲ್ಲಿ ತರಕಾರಿ ಮಾರಾಟ ಮಾಡಲು ಅಡ್ಡಿಪಡಿಸುತ್ತಾರೆ. ನೆಲ ಬಾಡಿಗೆ ವಸೂಲಿ ಮಾಡುವವರು ನಗರಸಭೆಯ ರಶೀದಿ ನೀಡಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿಗೆ ದೂರು ಮಾಡಲಾಗುವುದು ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಾರ್ವಜನಿಕರು ಮತ್ತು ವ್ಯಾಪಾರಸ್ಥರ ದೂರು ಹಿನ್ನೆಲೆಯಲ್ಲಿ ಕೂಡಲೇ ಟೆಂಡರ್‌ದಾರರಿಗೆ ನೋಟೀಸ್ ಜಾರಿ ಮಾಡಿ ಸಮಸ್ಯೆ ಪರಿಹರಿಸಬೇಕು. ಬೀದಿಬದಿ ವ್ಯಾಪಾರಸ್ಥರಿಂದ ಶುಲ್ಕ ಪಡೆದ ಕೂಡಲೇ ರಶೀದಿ ನೀಡಲು ಸೂಚಿಸಬೇಕು ಎಂದು ಪೌರಾಯುಕ್ತರಿಗೆ ಹೇಳಿದರು.

ತಹಸೀಲ್ದಾರ್ ರೇಹಾನ್ ಪಾಷಾ, ವೃತ್ತ ನಿರೀಕ್ಷಕ ರಾಜಾ ಫಕ್ರುದ್ದೀನ್ ದೇಸಾಯಿ, ಕೆಇಬಿ ಎಇಇ ರಾಜಣ್ಣ, ಪಿಆರ್‌ಡಿ ಎಇಇ ಎನ್. ಕಾವ್ಯಾ, ಅರಣ್ಯ ಇಲಾಖೆಯ ಡಿ.ಬಹುಗುಣ, ಸಿಡಿಪಿಒ ಸಿ.ಹರಿಪ್ರಸಾದ್ ಮತ್ತಿತರರು ಇದ್ದರು.

ದಾಖಲೆ ಅಗತ್ಯಿವಲ್ಲ: ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅಲೆದಾಟ ತಪ್ಪಿಸಲು ಸಕಾಲ ಯೋಜನೆ ಜಾರಿ ಮಾಡಲಾಗಿದೆ. ಇ-ಸ್ವತ್ತು ಏಳು ದಿನದ ಒಳಗೆ ವಿತರಣೆ ಮಾಡಬೇಕು. ಒಮ್ಮೆ ತೆರಿಗೆ ಮತ್ತು ದಾಖಲೆ ಸಲ್ಲಿಕೆ ಮಾಡಿದ ಮೇಲೆ ಇ-ಸ್ವತ್ತು ನವೀಕರಣಕ್ಕೆ ಮತ್ತೆ ದಾಖಲೆ ಪಡೆಯುವ ಅಗತ್ಯವಿರುವುದಿಲ್ಲ.- ಮಹೇಂದ್ರ ಕುಮಾರ್, ಜಿಲ್ಲಾ ಯೋಜನಾ ನಿರ್ದೇಶಕ

ಸದಸ್ಯರ ಅಳಲು: ನಮ್ಮ ಮನೆಗಳ ಇ-ಸ್ವತ್ತುಗಳಿಗೆ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಅಲೆದಾಡಿದ್ದೆವೆ. ಒಬ್ಬರ ಮೇಲೊಬ್ಬರು ಹೇಳಿಕೊಂಡು ಸಮಯ ವ್ಯಥ ಮಾಡುತ್ತಾರೆ. ಇನ್ನೂ ನಮ್ಮ ವಾರ್ಡ್‌ನಲ್ಲಿ ಸಣ್ಣಪುಟ್ಟ ಸಮಸ್ಯೆಗಳ ಸಂಬಂಧ ಹೇಳಿದರೆ ಅದಕ್ಕೂ ಕ್ಯಾರೆ ಅನ್ನುವುದಿಲ್ಲ ಎಂದು ನಗರಸಬೆ ಸದಸ್ಯರಾದ ಆರ್.ರುದ್ರನಾಯಕ, ಹೊಯ್ಸಳ ಗೋವಿಂದ, ಟಿ.ಮಲ್ಲಿಕಾರ್ಜುನ, ವಿರೂಪಾಕ್ಷಪ್ಪ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net