ಜನಸಂಪರ್ಕ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ

19 HANUR 2
ಹನೂರಿನಲ್ಲಿ ಆಯೋಜಿಸಿದ್ಧ ವಿದ್ಯುತ್ ಜನಸಂಪರ್ಕ ಸಭೆಯಲ್ಲಿ ರೈತರು ಅಧಿಕಾರಿಗಳ ಮುಂದೆ ಸಮಸ್ಯೆ ಹೇಳಿಕೊಂಡರು. ರಂಗಸ್ವಾಮಿ, ಆನಂದಮೂರ್ತಿ, ಮಹೇಶ್ ಇತರರು ಇದ್ದರು.
Published on

ಹನೂರು: ಹೆಚ್ಚುವರಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಡಬೇಕು. ಬೆಳಗಿನ ಸಮಯದಲ್ಲಿ ವ್ಯರ್ಥವಾಗಿ ಉರಿಯುತ್ತಿರುವ ಬೀದಿ ದೀಪಕ್ಕೆ ಕಡಿವಾಣ ಹಾಕಬೇಕು. ಪವರ್ ಸ್ಟೇಷನ್ ಸ್ಥಾಪಿಸಬೇಕು...

ಇದು ಪಟ್ಟಣದ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಶುಕ್ರವಾರ ವಿದ್ಯುತ್ ಸಂಬಂಧ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರಿಂದ ಕೇಳಿ ಬಂದ ಪ್ರಮುಖ ಸಮಸ್ಯೆಗಳು.

ಉದ್ದನೂರು ಗ್ರಾಮದ ಶಿವಸ್ವಾಮಿ ಮಾತನಾಡಿ, 5 ಜಮೀನಿನ ಪಂಪ್‌ಸೆಟ್‌ಗಳಿಗೆ 25 ಕೆ.ವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದೆ. ಆದರೆ ವಿದ್ಯುತ್ ಕೊರತೆಯಿಂದ ಕೃಷಿಗೆ ನೀರು ಸಾಲುತ್ತಿಲ್ಲ. ಇದರಿಂದ ತೊಂದರೆಯನ್ನು ಅನುಭವಿಸುವಂತಾಗಿದೆ. ಹಾಗಾಗಿ 63 ಕೆ.ವಿ ಸಾಮರ್ಥ್ಯದ ಟಿಸಿ ಅಳವಡಿಸುವಂತೆ ಮನವಿ ಮಾಡಿದರು.

ಹನೂರಿನ ಆಂಜನೇಯಸ್ವಾಮಿ ಬಡಾವಣೆಯವರು ಮಾತನಾಡಿ, ಬಡಾವಣೆಯ ರಸ್ತೆ ಬದಿಯಲ್ಲಿ ಟಿಸಿಯನ್ನು ಅಳವಡಿಸಲಾಗಿದೆ. ಆದರೆ ಇದು ವಾಹನ ಸಂಚಾರಕ್ಕೆ ತೊಡುಕಾಗಿ ಪರಿಣಮಿಸಿದೆ. ಆದ್ದರಿಂದ ವಿದ್ಯುತ್ ಕಂಬದೊಂದಿಗೆ ಟಿಸಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರು.

ಇನ್ನು ಭಾರತೀಯ ಕಿಸಾನ್ ಸಂಘದ ರಾಜ್ಯ ಸಂಚಾಲಕ ರಾಮಾಪುರ ರಾಜೇಂದ್ರ ಮಾತನಾಡಿ, ಕೃಷಿಗೆ ಅನುಕೂಲವಾಗುವಂತೆ ರೈತರು ಹೆಚ್ಚುವರಿ ಟಿಸಿಯನ್ನು ಅಳವಡಿಸುವಂತೆ 2 ವರ್ಷದಿಂದಲೂ ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ ಈವರೆಗೂ ಸಮಸ್ಯೆ ಬಗೆಹರಿಸಿಲ್ಲ. ಇದರಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಮುತುರ್ವಜಿ ವಹಿಸಿ ಹೆಚ್ಚುವರಿ ಟಿಸಿಯನ್ನು ಅಳವಡಿಸುವಂತೆ ಒತ್ತಾಯಿಸಿದರು.

ಉದ್ದನೂರಿನ ಪ್ರಭುಸ್ವಾಮಿ ಮಾತನಾಡಿ, ತಾಲೂಕಿನ ಗ್ರಾಮಗಳಲ್ಲಿ ಹಗಲಿನಲ್ಲಿ ಬೀದಿ ದೀಪಗಳು ವ್ಯರ್ಥವಾಗಿ ಉರಿಯುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದರು. ಹಾಗೆಯೇ ಹೂಗ್ಯಂ ಹಾಗೂ ಇನ್ನಿತರೆಡೆ ಪವರ್ ಸ್ಟೇಷನ್ ಸ್ಥಾಪಿಸುವಂತೆ ಸಭೆಯಲ್ಲಿ ಒತ್ತಾಯ ಕೇಳಿ ಬಂತು.

ಸಮಸ್ಯೆ ಆಲಿಸಿದ ಸೆಸ್ಕ್ ಇಇ ತಬಸ್ಸುಮ್ ಬಾನು ಪ್ರತಿಕ್ರಿಯಿಸಿ, ಹೂಗ್ಯಂನಲ್ಲಿ ಪವರ ಸ್ಟೇಷನ್ ಸ್ಥಾಪಿಸುವ ಸಂಬಂಧ ಈಗಾಗಲೇ ಕ್ರೀಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜತೆಗೆ ಎಲ್ಲೇಮಾಳ, ಮಣಗಳ್ಳಿಯಲ್ಲೂ ಪವರ್ ಸ್ಟೇಷನ್ ಸ್ಥಾಪಿಸುವ ಸಂಬಂಧ ಅಗತ್ಯ ಕ್ರಮ ವಹಿಸಲಾಗಿದೆ. ಇನ್ನು ಬೀದಿದೀಪ ಉರಿಯುತ್ತಿರುವ ಬಗ್ಗೆ ಜಿಪಂ ಸಿಇಒ ಅವರ ಗಮನಕ್ಕೆ ತಂದು ಕಡಿವಾಣ ಹಾಕಲಾಗುವುದು. ಸಭೆಯಲ್ಲಿ ತಿಳಿಸಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಎಇಇ ರಂಗಸ್ವಾಮಿ, ಎಇ ಆನಂದಮೂರ್ತಿ, ಜೆಇಗಳಾದ ಮಹೇಶ್, ವೆಂಕಟೇಶ್‌ಮೂರ್ತಿ, ನವೀನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net