ಗ್ರಾಮಸಭೆಯಲ್ಲಿ ದೂರುಗಳ ಸುರಿಮಳೆ

11 gkp 1.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಹಳೇ ಕಟ್ಟಡ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯನ್ನು ಕುಲ್ಲಚಂಡ ಪ್ರಮೋದ್ ಗಣಪತಿ ಉದ್ಘಾಟಿಸಿದರು. ಎಂ. ಮಂಜುಳಾ, ಎಂ.ಎಸ್ ಮೋಹನ್‌ಕುಮಾರ್, ತಿಮ್ಮಯ್ಯ ಇದ್ದರು.
Published on

ಕುಡಿಯುವ ನೀರು, ಸ್ವಚ್ಛತೆ, ಸಂಚಾರ ನಿಯಮ, ಅಪರಾಧಿ ಚಟುವಟಿಕೆಗಳ ತಡೆಗೆ ಆಗ್ರಹ

ಗೋಣಿಕೊಪ್ಪಲು : ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವ ಯುವಕರನ್ನು ಸರಿದಾರಿಗೆ ತರುವ ಪ್ರಯತ್ನ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ, ಹೊರಗಿನಿಂದ ಬಂದು ಅನಧಿಕೃತವಾಗಿ ವ್ಯಾಪಾರ ನಡೆಸುವವರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಗೋಣಿಕೊಪ್ಪ ಗ್ರಾಮ ಗ್ರಾಮಸ್ಥರು ಒತ್ತಾಯಿಸಿದರು.

ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಹಳೇ ಕಟ್ಟಡ ಸಭಾಂಗಣದಲ್ಲಿ ಗ್ರಾಪಂ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಬೇಸಿಗೆ ಪ್ರಾರಂಭವಾಗುತ್ತಿರುವುದರಿಂದ ಕುಡಿಯವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಅದಕ್ಕೂ ಮೊದಲೇ ಎಚ್ಚೆತ್ತುಕೊಂಡು ನೀರಿನ ಸಮಸ್ಯೆ ಬಗೆಹರಿಸಬೇಕು. ಹೋಟೆಲ್‌ಗಳಲ್ಲಿ ಶುಚಿತ್ವದ ಕೊರತೆ, ಪಟ್ಟಣದ ಹೊರಗಿನವರು ಗೋಣಿಕೊಪ್ಪಕ್ಕೆ ಪ್ರವೇಶಿಸುವಾಗ ಕಸವನ್ನು ಎಸೆಯುತ್ತಿರುವ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಹೆಲ್ಮೆಟ್ ಧರಿಸದೆ ದ್ವಿಚಕ್ರ ಚಾಲನೆ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ, ಕಾಲೇಜು ಬಿಡುವ ಸಂದರ್ಭದಲ್ಲಿ ದ್ವಿಚಕ್ರ ವಾಹನದಲ್ಲಿ ಕರ್ಕಶ ಹಾರ್ನ್ ಶಬ್ದ ಮಾಡುವ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾದಕ ಪದಾರ್ಥಗಳ ಸೇವನೆಗೆ ಬಲಿಯಾಗುತ್ತಿರುವ ಯುವಕರನ್ನು ಸರಿದಾರಿಗೆ ತರುವ ಪ್ರಯತ್ನಕ್ಕೆ ಮುಂದಾಗಬೇಕು. ಕೆಲವು ಅಹಿತಕರ ಘಟನೆಗಳು, ಅಪರಾಧ ವಿಚಾರಗಳನ್ನು ಪೊಲೀಸರಿಗೆ ತಿಳಿಸಿದಾಗ ಅಪರಾಧಿಗೆ ಮಾಹಿತಿ ಕೊಟ್ಟವರ ವಿಚಾರವನ್ನು ತಿಳಿಸುವ ಕಾರಣ ಯಾರೂ ದೂರು ನೀಡಲು ಮುಂದಾಗುತ್ತಿಲ್ಲ. ಹೀಗಾಗಿ ಮಾಹಿತಿ ಕೊರತೆಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

ಗ್ರಾಮ ಸಭೆಯನ್ನು ಹಗುರವಾಗಿ ಪರಿಗಣಿಸುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಇಂತಹ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುವಂತೆ ಶಾಸಕರಿಗೆ ದೂರು ನೀಡಿ ಕ್ರಮ ತೆಗೆದುಕೊಳ್ಳಲು ಮನವಿ ಮಾಡಲಾಯಿತು.

ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಂದ ಹಣ ವಸೂಲಿ ಮಾಡುವ ಚಾಳಿ ಮುಂದುವರಿದಿದ್ದು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ಗೋಣಿಕೊಪ್ಪ ಪಟ್ಟಣದಲ್ಲಿ ಮಾರಾಟವಾಗುವ ಕರಿದ ಪದಾರ್ಥಗಳು ಗುಣಮಟ್ಟದಿಂದ ಕೂಡಿರದೆ ರೋಗ ಹರಡುವ ಭೀತಿ ಎದುರಿಸುತ್ತಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಹೊರಗಿನಿಂದ ಮಾರಾಟ ಮಾಡಲು ತರುವ ಸಮೋಸ ಇನ್ನಿತರ ಎಣ್ಣೆಯಲ್ಲಿ ಕರೆದ ಪದಾರ್ಥಗಳನ್ನು ಗುಣಮಟ್ಟ ಪರೀಕ್ಷಿಸಬೇಕು ಎಂದು ಸಭೆಗೆ ತಿಳಿಸಲಾಯಿತು.

ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಖರೀದಿಸಲು ಹೋದಾಗ ಪ್ರತಿ ಬಾರಿಯೂ ಸರ್ವರ್ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಇದರಿಂದ ಕೂಲಿಕಾರ್ಮಿಕರು ಅಕ್ಕಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ಜತೆಗೆ ಕೂಲಿಯನ್ನೂ ಕಳೆದುಕೊಳ್ಳುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ಗಮನ ಸೆಳೆದರು.

ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಬೇಕು, ರಾತ್ರಿ ಪೊಲೀಸರ ಬೀಟ್ ಹೆಚ್ಚಿಸಬೇಕು, ಟ್ರಾಫಿಕ್ ಸಮಸ್ಯೆ, ಪೌರಕಾರ್ಮಿಕರಿಗೆ ಸ್ವಂತ ಸೂರಿನ ವ್ಯವಸ್ಥೆ ಕಲ್ಪಿಸುವಂತೆ ಇನ್ನಿತರ ಬೇಡಿಕೆಗಳನ್ನು ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾಪಿಸಿದರು.

ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ, ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕೊಡವ ಸಾಹಿತ್ಯ ಅಕಾಡೆಮಿ ನಿರ್ದೇಶಕ ನಾಯಂದಿರ ಶಿವಾಜಿ, ಪ್ರಮುಖರಾದ ಕುಪ್ಪಂಡ ಗಣೇಶ್, ಗಣೇಶ್‌ರೈ, ಹಬಿಬುನ್ನೀಸ, ಮಹಾದೇವ್ ಸೇರಿದಂತೆ ಹಲವರು ಗ್ರಾಮದ ಸಮಸ್ಯೆಗಳನ್ನು ಬಗೆಹರಿಸುವಂತೆ ಮತ್ತು ಗ್ರಾಮವನ್ನು ಅಭಿವೃದ್ಧಿಪಡಿಸಲು ಸಲಹೆ ನೀಡಿದರು.

ಗ್ರಾಮಸ್ಥರ ಮನವಿ ಆಲಿಸಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗ್ರಾ.ಪಂ. ಉಪಾಧ್ಯಕ್ಷೆ ಎಂ.ಮಂಜುಳಾ, ತಾಲೂಕು ಯೋಜನಾಧಿಕಾರಿ ಎಂ.ಎಸ್ ಮೋಹನ್‌ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಸೇರಿದಂತೆ 18 ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net