

ಸುಂಟಿಕೊಪ್ಪ : ಬಡಾವಣೆಗಳಿಗೆ ಮೂಲಸೌಕರ್ಯ, ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಗ್ರಾಮಸ್ಥರು ಒತ್ತಾಯಿಸಿದರು.
ಇಲ್ಲಿನ ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ 2025-26ನೇ ಸಾಲಿನ ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ದೂರುಗಳ ಸರಮಾಲೆಯೇ ಹರಿದುಬಂದಿತ್ತು.
ಗ್ರಾಮಸ್ಥರಾದ ಸೂಫಿ, ಇಬ್ರಾಹಿಂ, ಕೆ.ಎ.ಲತೀಫ್, ರಜಾಕ್, ದಿನೇಶ್, ಉದಯಕುಮಾರ್, ಡೇವಿಡ್ ಜಾನ್ಸನ್, ಮಮತಾ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥ ಇಬ್ರಾಹಿಂ ಮಾತನಾಡಿ, ಪ್ರತಿ ಗ್ರಾಮಸಭೆಯಲ್ಲಿ ನಾವು ಹೇಳುವುದು, ನೀವು ಬರೆದುಕೊಳ್ಳುವುದು ಮತ್ತು ಸಭೆಯಲ್ಲಿ ಓದುವುದಕ್ಕೆ ಮಾತ್ರ ಸೀಮಿತವಾಗಿದೆ. ಯಾವ ಯಾವ ಬೇಡಿಕೆಗಳು ಈಡೇರಿವೆ ಎಂದು ತಿಳಿಸುವಂತೆ ಪಟ್ಟು ಹಿಡಿದರು. ಗದ್ದೆಹಳ್ಳ ನಿವಾಸಿ ರುಕ್ಸಾನಾ, ರಜಾಕ್ ಮತ್ತು ಪಟ್ಟೆಮನೆ ಉದಯಕುಮಾರ್ ಮಾತನಾಡಿ, ಗ್ರಾಮದ ತ್ಯಾಜ್ಯ ನೀರು ಮತ್ತು ಮಳೆಗಾಲದಲ್ಲಿ ಪ್ರವಾಹದ ನೀರು ಕೃಷಿ ಮತ್ತು ಮನೆಗಳಿಗೆ ನುಗ್ಗುತ್ತಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಕೆಲವು ಕಡೆಗಳಲ್ಲಿ ಕಾಮಗಾರಿಗಳು ಅಪೂರ್ಣವಾಗಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಸ್‌ಐ ದೇವಾಲಯದ ಧರ್ಮಗುರು ಮಧುಕಿರಣ್, ವಿಲಿಯಂ ಮತ್ತು ರತ್ನಕುಮಾರ್ ಮಾತನಾಡಿ, ಕೊಡವ ಸಮಾಜದ ಸಭಾಂಗಣದಲ್ಲಿ ನಿಯಮ ಮೀರಿ ತಡ ರಾತ್ರಿಯ ವರೆಗೂ ಡಿಜೆ ಮತ್ತು ಧ್ವನಿವರ್ಧಕಗಳನ್ನು ಬಳಕೆ ಮಾಡುತ್ತಿದ್ದು ಸಮಸ್ಯೆಯಾಗುತ್ತಿದೆ. ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ಕೊಟ್ಟು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ನೋಡಲ್ ಅಧಿಕಾರಿ ಸಿದ್ದೇಗೌಡ ತಾಪಂ ಕಾರ್ಯನಿರ್ವಹಣಾಧಿಕಾರಿ ಅವರನ್ನು ಕರೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಪಟ್ಟಣದ ಕಸ ವಿಲೇವಾರಿ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆದು ಪಂಚಾಯಿತಿ ಕಸವಿಲೆವಾರಿ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ಸುಂಟಿಕೊಪ್ಪದಲ್ಲಿ ಒಣಕಸ ವಿಲೇವಾರಿ ಘಟಕ ಮಾತ್ರ ಇದ್ದು, ಹಸಿ ಕಸವನ್ನು ಮನೆಯವರೇ ವಿಲೇವಾರಿಗೊಳಿಸಬೇಕೆಂಬ ಮಾರ್ಗಸೂಚಿ ಇದೆ. ಕಸ ವಿಲೇವಾರಿಯಲ್ಲಿ ಜನರ ಸಹಕಾರವು ಬೇಕೆಂದು ಮನವಿ ಮಾಡಿದರು.
ಕೆ.ಎ.ಲತೀಫ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ಪೈಸಾರಿ ಜಾಗಗಳು ಅತಿಕ್ರಮಣಗೊಂಡಿವೆ. ಅಲ್ಲದೇ ಅನಧಿಕೃತ ಕಟ್ಟಡಗಳು ನಿರ್ಮಾಣಗೊಂಡಿವೆ. ಇವುಗಳಿಗೆ ಪಂಚಾಯಿತಿ ವತಿಯಿಂದ ಮೂಲಸೌಲಭ್ಯ ಹೊಂದಲು ಆದೇಶ ಪ್ರತಿ ನೀಡಲಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿ.ಆರ್.ಸುನಿಲ್ ಕುಮಾರ್ ಈ ಬಗ್ಗೆ ಕ್ರಮವಹಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರಾದ ಪ್ರಸಾದ್ ಕುಟ್ಟಪ್ಪ, ಕೆ.ಎಂ.ಆಲಿಕುಟ್ಟಿ, ಶಬ್ಬೀರ್ , ಮಂಜುನಾಥ್, ಬಿ.ಎಂ.ಸುರೇಶ್, ಪಿ.ಎಫ್.ಸಬಾಸ್ಟಿನ್, ಸೋಮನಾಥ್, ಶಾಂತಿ, ಗೀತಾ, ಮಂಜುಳಾ, ನಾಗರತ್ನ, ವಸಂತಿ, ರಫೀಕ್ ಖಾನ್, ಜಿನಾಸುದ್ದೀನ್, ಸೆಲಿನಾ ಜೆಫ್ರಿ, ಡಿ.ಎಂ.ಮಂಜುನಾಥ್, ಲೆಕ್ಕ ಪರಿಶೋಧಕಿ ಚಂದ್ರಕಲಾ, ಸಿಬ್ಬಂದಿ ಸಂದ್ಯಾ ಇತರರಿದ್ದರು.