ಮಕ್ಕಳಿಂದ ದೂರಿನ ಸುರಿಮಳೆ

20SPT2
ಸೋಮವಾರಪೇಟೆ ಸಮೀಪದ ಯಡೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯನ್ನು ವಿದ್ಯಾರ್ಥಿಗಳಾದ ಅನಿಕಾ ಮತ್ತು ಅರ್ಜುನ್ ಉದ್ಘಾಟಿಸಿದರು. ಯಶಾಂಂತ್, ರೇಣುಕಾ, ಆಸ್ಮಾ, ಸುಮನ್, ಶ್ರೀದೇವಿ, ಮಿಲನಾ, ಇದ್ದರು.
Published on

ಮಕ್ಕಳ ಗ್ರಾಮಸಭೆಯಲ್ಲಿ ತಮ್ಮೂರಿನ ಸಮಸ್ಯೆಗಳನ್ನು ಬಿಚ್ಚಿಟ್ಟ ಚಿಣ್ಣರು

ಸೋಮವಾರಪೇಟೆ : ಶುಚಿ ಪ್ಯಾಡ್, ಪುಸ್ತಕಗಳನ್ನು ಕೊಡಿಸಿ, ನಮ್ಮೂರಿನಲ್ಲಿ ರಸ್ತೆ ಹಾಳಾಗಿದೆ. ಮಳೆಗಾಲದಲ್ಲಿ ನಡೆದುಕೊಂಡು ಶಾಲೆಗೆ ಬರಲು ಕಷ್ಟವಾಗುತ್ತಿದೆ ರಸ್ತೆ ಮಾಡಿಸಿಕೊಡಿ, ನಮಗೂ ಶಾಲಾ ವಾಹನ ಬೇಕು ಎಂದು ಮಕ್ಕಳ ಗ್ರಾಮಸಭೆಯಲ್ಲಿ ಬೇಡಿಕೆಗಳ ಪಟ್ಟಯನ್ನೇ ನೀಡಿದರು.

ಹಾನಗಲ್ಲು ಪಂಚಾಯಿತಿ, ಸಿ.ಎಂ.ಸಿ.ಎ ಮತ್ತು ನಾವು ಪ್ರತಿಷ್ಠಾನದ ಸಹಯೋಗದಲ್ಲಿ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಶಾಲೆಯ ಆಟದ ಮೈದಾನ ದುರಸ್ತಿ ಮಾಡಿಸಬೇಕು. ಆಟೋಪಕರಣ, ಕಾಂಪೌಂಡ್, ಬೆಂಚುಗಳು ಬೇಕೆಂದು ಸಂಬಂಧಿಸಿದ ಇಲಾಖಾಧಿಕಾರಿಗಳಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದರು.

ನಾವು ಪ್ರತಿಷ್ಠಾನ ಕಾರ್ಯ ನಿರ್ವಾಹಕಿ ಸುಮನಾ ಮ್ಯಾಥ್ಯೂ ಮಾತನಾಡಿ, ಮಕ್ಕಳು ಸೌಲಭ್ಯಗಳನ್ನು ಪಡೆದುಕೊಳ್ಳುವುದು ಅವರ ಹಕ್ಕಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮಸಭೆಗಳು ನಡೆಯುತ್ತವೆ. ಮಕ್ಕಳು ತಮ್ಮ ಬೇಡಿಕೆಯನ್ನು ಮಂಡಿಸಬಹುದು. ಸೌಲಭ್ಯ ಕೊಡಿಸಲು ನಮ್ಮ ಪ್ರಯತ್ನವೂ ಇರುತ್ತದೆ ಎಂದು ಹೇಳಿದರು. ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದೆ. ಅಧಿಕಾರಿಗಳು ಮಕ್ಕಳ ಬೇಡಿಕೆಯನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗುತ್ತದೆ ಎಂದು ಹೇಳಿದರು.

ಕೆಲ ಸಮಸ್ಯೆಗಳಿಂದ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿರುವುದನ್ನು ಕಂಡಿಕೊಂಡಿದ್ದೇವೆ. ಪಾಲಕರು ಮತ್ತು ಮಕ್ಕಳ ಮನವೊಲಿಸಿ ಶಾಲೆ ಬಿಡುವ ಕಾರ್ಯವೂ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಮಕ್ಕಳ ಗ್ರಾಮಸಭೆಗೆ ಹಾಜರಾದರೆ ಸಮಸ್ಯೆಗಳು ಮತ್ತು ಪರಿಹಾರ ಕ್ರಮದ ಬಗ್ಗೆ ಚರ್ಚೆ ಮಾಡಬಹುದು ಎಂದು ಹೇಳಿದರು.

ಜಿಲ್ಲಾ ಮಕ್ಕಳ ಸಹಾಯವಾಣಿ ಘಟಕ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತರು, ಮಕ್ಕಳ ವಿಶೇಷ ಪೋಲಿಸ್ ದಳ ಸಿಬ್ಬಂದಿ ಮಕ್ಕಳಿಗೆ ಇಲಾಖೆಗಳ ಸೌಲಭ್ಯಗಳ ಮಾಹಿತಿ ನೀಡಿದರು. ವಿದ್ಯಾರ್ಥಿಗಳಾದ ಅನಿಕಾ ಮತ್ತು ಅರ್ಜುನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಯಶಾಂತ್ ಕುಮಾರ್, ಉಪಾಧ್ಯಕ್ಷೆ ರೇಣುಕಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಸ್ಮಾ, ನೋಡಲ್ ಅಧಿಕಾರಿ ಮಿಲನಾ ಕೆ. ಭರತ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀದೇವಿ ಮುದೋಳ, ಸಿ.ಆರ್.ಪಿ ಪ್ರೇಮಾ, ನಾವು ಪ್ರತಿಷ್ಠಾನ ಸಂಸ್ಥೆಯ ಪ್ರತಿನಿಧಿಗಳಾದ ಪೊನ್ನಪ್ಪ, ಕುಮಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net