ಶಾಸಕಿ ಶಾರದಾ ಪೂರ್ಯ ನಾಯ್ಕ ಮುಂದೆ ದೂರುಗಳ ಸುರಿಮಳೆ

13 anr mla parisheelane (1)
ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಾರದಾ ಪೂರ್ಯ ನಾಯ್ಕ ದಾಖಲೆಗಳನ್ನು ಪರಿಶೀಲಿಸಿದರು. ಬಸವರಾಜಪ್ಪ, ನಾರಾಯಣ ಗೌಡ, ರಂಗನಾಥ ಶಿವಕುಮಾರ್, ಇರ್ಫಾನ್ ಇತರರಿದ್ದರು.
Published on

ಆಯನೂರು: ಸಮುದಾಯ ಕೇಂದ್ರದಲ್ಲಿ ಸಂಜೆ ಮೇಲೆ ವೈದ್ಯರು ಸರಿಯಾಗಿ ಇರುವುದೇ ಇಲ್ಲ. ಅದರಲ್ಲೂ ಶನಿವಾರ, ಭಾನುವಾರ ಬಂತೆಂದರೆ ಒಬ್ಬರೂ ಇತ್ತ ಮುಖ ಮಾಡುವುದಿಲ್ಲ. ಆಂಬುಲೆನ್ಸ್ ಇದ್ದರೂ ಇಲ್ಲದಂತಾಗಿದೆ, ತುರ್ತು ಪರಿಸ್ಥಿತಿಯಲ್ಲಿ ಪರಿಸ್ಥಿತಿ ಹೇಳ ತೀರಲಾಗದು. ರೋಗಿಗಳಿಗೆ ಬರೆದುಕೊಡುವ ಮಾತ್ರೆಗಳು ಆಸ್ಪತ್ರೆಯಲ್ಲಿ ಇರುವುದೇ ಇಲ್ಲ. ಹೊರಗಡೆ ಹೋಗಬೇಕು. ಸುರಕ್ಷಾ ಸಮಿತಿ ಇಲ್ಲ…
ಆಯನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಶಾಸಕಿ ಶಾರದಾ ಪೂರ್ಯ ನಾಯ್ಕ ಅವರ ಮುಂದೆ ಸ್ಥಳೀಯರು ಹೀಗೆ ದೂರುಗಳ ಸುರಿಮಳೆಗೈದರು.

ಸುತ್ತಲಿನ ಗ್ರಾಮಗಳಿಗೆ ಆಯನೂರು ಕೇಂದ್ರ ಆಗಿದೆ. ಕೇಂದ್ರದಲ್ಲಿ ಉತ್ತಮ ವೈದ್ಯರಿದ್ದು ಒಳ್ಳೆಯ ಚಿಕಿತ್ಸೆಯೂ ಸಿಗುತ್ತಿದೆ. ಆದರೆ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ, ತುರ್ತು ಸಮಯದಲ್ಲಿ ವೈದ್ಯರು ಲಭ್ಯವಾಗುತ್ತಿಲ್ಲ. ರಾತ್ರಿ ವೇಳೆಯಲ್ಲಿ ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
24 ಗಂಟೆಯೂ ವೈದ್ಯರು ಕೇಂದ್ರದಲ್ಲಿ ಇರುವಂತೆ ವ್ಯವಸ್ಥೆ ಮಾಡಿ. ಆರೋಗ್ಯ ಕೇಂದ್ರ ಇಲ್ಲೇ ಇದ್ದರೂ ತುರ್ತು ಚಿಕಿತ್ಸೆ ದೂರದ ಮಾತಾಗಿದೆ. ಸಮೀಪದಲ್ಲೇ ಶಾಲೆ, ಕಾಲೇಜಿದ್ದು ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಲಭಿಸದೆ ವಿದ್ಯಾರ್ಥಿಗಳು ಶಿವಮೊಗ್ಗಕ್ಕೆ ತೆರಳಿದ ಅನೇಕ ಘಟನೆಗಳಿವೆ. ಕೂಡಲೆ ಎಲ್ಲ ಸಮಸ್ಯೆಗಳು ಇತಿಶ್ರೀ ಹಾಡಿ ಎಂದು ಒಕ್ಕೊರಳ ಮನವಿ ಮಾಡಿದರು.
ಸ್ಥಳೀಯರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಶಾಸಕಿ, ಇಲ್ಲಿ ಸಮಸ್ಯೆಗಳ ದೊಡ್ಡ ಪಟ್ಟಿಯೇ ಇದೆ. ಯಾವ ಔಷಧ ಖಾಲಿಯಾಗಿದೆ ಎಂಬುದನ್ನು ಪರಿಶೀಲನೆ ನಡೆಸಿ ತಕ್ಷಣ ತರಿಸಿಕೊಳ್ಳಿ. ನನ್ನ ಕ್ಷೇತ್ರದಲ್ಲಿ ಎಲ್ಲಿಯೂ ತೊಂದರೆ ಇಲ್ಲ. ಹೊಳೆಹೊನ್ನೂರಿನಲ್ಲಿ ಸಂಜೆಯೂ ಒಪಿಡಿ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಸರಿಪಡಿಸಿಕೊಂಡು ಜನರಿಂದ ದೂರುಗಳು ಬಾರದಂತೆ ಎಚ್ಚರ ವಹಿಸಿ ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಮುಖರಾದ ಬಸವರಾಜಪ್ಪ, ನಾರಾಯಣ ಗೌಡ, ರಂಗನಾಥ ಶಿವಕುಮಾರ್, ಇರ್ಫಾನ್ ಇತರರಿದ್ದರು.

ಮಕ್ಕಳ ಡಾಕ್ಟರ್ ಇರುವುದೇ ಒಬ್ಬರು
ಸರ್ಕಾರದಿಂದ ಬರುವ ಮಾತ್ರೆ, ಟಾನಿಕ್ ಸೇರಿದಂತೆ ಇತರೆ ವಸ್ತುಗಳು ಆಸ್ಪತ್ರೆಯಲ್ಲಿ ಲಭ್ಯವಿದೆ. ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಎಲ್ಲ ವೈದ್ಯರು ಕೇಂದ್ರದಲ್ಲಿರುತ್ತಾರೆ. ನಮ್ಮಲ್ಲಿ ಮಕ್ಕಳ ಡಾಕ್ಟರ್ ಒಬ್ಬರೇ ಇರುವುದು. ಅವರೇ ಹಗಲು, ರಾತ್ರಿ ಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದ್ದು ಕಷ್ಟವಾಗುತ್ತಿದೆ ಎಂದು ವೈದ್ಯಾಧಿಕಾರಿ ಶಿಲ್ಪಾ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net