

ಕೊಳ್ಳೇಗಾಲ: ಯರಗಂಬಳ್ಳಿ ಗ್ರಾಮದಲ್ಲಿ ಐಪಿ ಸೆಟ್‌ಗಳಿಗೆ ಆರ್‌ಆರ್ ನಂಬರ್ ಇಲ್ಲದಿರುವ ಬಗ್ಗೆ ದೂರಿ, ಸತ್ತೇಗಾಲದ ಜೆಇ ಮಹದೇವಸ್ವಾಮಿ ಕಾರ್ಯವೈಖರಿ ಬಗ್ಗೆ ಸತ್ತೇಗಾಲ ಗ್ರಾಮದ ಶಶಿಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಸೆಸ್ಕ್ ಉಪವಿಭಾಗ ಕಚೇರಿಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಹರಳೆ ರಸ್ತೆಯಲ್ಲಿ ಕಂಬಗಳು ಮುರಿದಿರುವ ಬಗ್ಗೆ ದೂರಿದರು.
ರಂಗಸ್ವಾಮಿ ಮಾತನಾಡಿ, ವಿದ್ಯುತ್ ತಂತಿಗಳು ಜೋತು ಬಿದ್ದು ಅಪಾಯಕ್ಕೆ ಆಹ್ವಾನ ನೀಡಿದಂತಿವೆ. ಕೆಲವಡೆ ಅವೈಜ್ಞಾನಿಕವಾಗಿ ಟಿಸಿಗಳನ್ನು ಅಳವಡಿಸಲಾಗಿದೆ. ಪಟ್ಟಣದಲ್ಲಿ ಬೀದಿ ದೀಪಗಳ ವ್ಯವಸ್ಥೆ ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಒತ್ತಾಯಿಸಿದರು.
ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸುಮ್ ಅಪ್ಜಾ ಪ್ರತಿಕ್ರಿಯಿಸಿ, ಕಳೆದ ಜನಸಂಪರ್ಕ ಸಭೆಯಲ್ಲಿ 23 ದೂರುಗಳ ಪೈಕಿ ಬಹುತೇಕ ದೂರುಗಳನ್ನು ಪರಿಹರಿಸಲಾಗಿದೆ. ಈ ಸಭೆಯಲ್ಲಿ ಒಟ್ಟು 11 ದೂರುಗಳು ಬಂದಿವೆ. ಆದ್ಯತೆ ಮೇರೆಗೆ ಈ ಎಲ್ಲ ದೂರುಗಳನ್ನು ಸರಿಪಡಿಸಲಾಗುವುದು ಎಂದರು.
ವಿದ್ಯುತ್ ಸ್ಥಾವರ(ಟಿ.ಸಿ) ಅಳವಡಿಕೆ ಬಗ್ಗೆ ದೂರು ಬಂದಿವೆ. ಮುಂದಿನ ಕುಂದುಕೊರತೆ ಸಭೆ ನಡೆಯುವುದರೊಳಗೆ ಎಲ್ಲ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಸೆಸ್ಕ್ ಎಇಇ ಎಂ.ರಾಜು, ಎಇಇ ಸಂತೋಷ್‌ಕುಮಾರ್, ಸಹಾಯಕ ಇಂಜಿನಿಯರ್ ಗಾನವಿ, ಸಹಾಯಕ ಲೆಕ್ಕಾಧಿಕಾರಿ ವಿನೋದ್ ಕುಮಾರ್ ಹಾಗೂ ಗ್ರಾಹಕರು ಅಣಗಳ್ಳಿ ಬಸವರಾಜು, ಸತ್ತೇಗಾಲ ಶಶಿಕುಮಾರ್, ಜವರಪ್ಪ, ಪಾಳ್ಯ ರಂಗಸ್ವಾಮಿ ಇತರರು ಇದ್ದರು.