ನಗರಸಭಾಧ್ಯಕ್ಷ ಎದುರು ದೂರುಗಳ ಸುರಿಮಳೆ

HUN-JUNE-26-3(CMC VISIT TO WARDS)
Published on

ಹುಣಸೂರು: ವರ್ಷದ ಹಿಂದೆ ಎಸ್‌ಟಿಪಿ ಪ್ಲಾಂಟ್‌ಗೆ ಸಂಪರ್ಕ ಕಲ್ಪಿಸಲು ಅಗೆದ ಗುಂಡಿ ಇಂದಿಗೂ ಮುಚ್ಚಿಲ್ಲ. ದಯವಿಟ್ಟು ಗುಂಡಿ ಮುಚ್ಚಿ ಅನಾಹುತ ತಪ್ಪಿಸಿರಿ. ಶಾಲೆ ಬಿಟ್ಟ ಸಮಯದಲ್ಲಿ ಗೋಕುಲ ರಸ್ತೆಯಲ್ಲಿ ವಾಹನಗಳ ದಟ್ಟಣೆ ನಿಯಂತ್ರಿಸಿ.

ಹುಣಸೂರು ನಗರಸಭಾಧ್ಯಕ್ಷ ಗಣೇಶ್ ಕುಮಾರಸ್ವಾಮಿ ನೇತೃತ್ವದಲ್ಲಿ ಗುರುವಾರ ಆಯೋಜಿಸಿದ್ದ ವಾರ್ಡ್ ಭೇಟಿ ಕಾರ್ಯಕ್ರಮ ವೇಳೆ ನಾಗರಿಕರಿಂದ ದೂರುಗಳ ಸುರಿಮಳೆಯನ್ನೇ ಅಧಿಕಾರಿಗಳು ಎದುರಿಸಿದರು.

12ನೇ ವಾರ್ಡ್ ವ್ಯಾಪ್ತಿಯ ಕಾಫಿ ವರ್ಕ್ಸ್ ರಸ್ತೆ(ಬ್ರಾಹ್ಮಣರ ಬೀದಿ)ಯಲ್ಲಿ ವರ್ಷದ ಹಿಂದೆ ಎಸ್‌ಟಿಪಿ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸಲು ಅಗೆದಿದ್ದ ಗುಂಡಿ ಇಂದಿಗೂ ಮುಚ್ಚಿಲ್ಲ. ವಾಹನ ಸವಾರರು ಮತ್ತು ಪಾದಚಾರಿಗಳು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಮುಖ್ಯರಸ್ತೆಯ ಪರಿಸ್ಥಿತಿಯೇ ಹೀಗಾದರೆ ಹೇಗೆ ಎಂದು ನಾಗರಿಕರು ಪ್ರಶ್ನಿಸಿದಾಗ, ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಸ್ಥಳದಲ್ಲೇ ವಾಟರ್‌ಬೋರ್ಡ್ ಅಧಿಕಾರಿಗಳಿಗೆ ಫೋನ್ ಮಾಡಿ ಕೂಡಲೇ ಸರಿಪಡಿಸುವಂತೆ ಸೂಚಿಸಿದರು.

12ನೇ ವಾರ್ಡಿನಲ್ಲಿ ಸಂತ ಜೋಸೆಫರ ಶಾಲೆಯ ಬಳಿಯಲ್ಲಿ 40ಕ್ಕೂ ಹೆಚ್ಚು ಬಡಕುಟುಂಬಗಳು ಹೆಂಚಿನ ಮನೆ ಮತ್ತು ತಗಡಿನಶೀಟ್ ಛಾವಣಿಯ ಮನೆಯಲ್ಲಿ ಕಳೆದ 40 ವರ್ಷಗಳಿಂದ ವಾಸಿಸುತ್ತಿದ್ದು, ಯಾವುದೇ ದಾಖಲೆಗಳಿಲ್ಲ. ನಗರಸಭೆ ಇತ್ತ ಗಮನಿಸಬೇಕೆಂದು ವಾರ್ಡ್ ಸದಸ್ಯ ವಿವೇಕಾನಂದ ಒತ್ತಾಯಿಸಿದರು. ಇದೇ ವೇಳೆ ಸಂತ ಜೋಸೆಫರ ವಿದ್ಯಾಸಂಸ್ಥೆಯಲ್ಲಿ 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆ ಆರಂಭ ಮತ್ತು ಶಾಲೆ ಬಿಟ್ಟ ವೇಳೆ ಇಡೀ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ನಿವಾಸಿಗಳು ಮನೆಯಿಂದ ಹೊರಬರಲಾಗುವುದಿಲ್ಲ. ಮಾತ್ರವಲ್ಲದೇ ವಾಹನಗಳ ಹೊಗೆಯಿಂದಾಗಿ ಈ ರಸ್ತೆಯಲ್ಲಿರುವ 10ಕ್ಕೂ ಹೆಚ್ಚು ಮನೆಯ ಮಂದಿಗೆ ಅಲರ್ಜಿ ಕಾಯಿಲೆ ಕಾಣಿಸಿಕೊಂಡಿದೆ. ಶಾಲೆಯ ಆಡಳಿತ ಮಂಡಳಿ ಮತ್ತು ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಪರಿಹಾರ ನೀಡಬೇಕೆಂದು ನಿವಾಸಿಗಳಾದ ಸಜ್ಜಿ ಜಾರ್ಜ್, ರೋನಿ, ಕೃಷ್ಣೇಗೌಡ, ಅಶ್ಮುಕ್ ಪಟೇಲ್, ಇಲಿಯಾಸ್ ಮುಂತಾದವರು ಒತ್ತಾಯಿಸಿದರು.

ವಾರ್ಡ್ ಭೇಟಿ ವೇಳೆ ನಗರಸಭಾ ಸದಸ್ಯ ಹರೀಶ್‌ಕುಮಾರ್, ಪೌರಾಯುಕ್ತೆ ಕೆ.ಮಾನಸಾ, ಎಇಇ ಶರ್ಮಿಳಾ, ಆರ್‌ಒ ಸಿದ್ದಪ್ಪ, ಶಿವಕುಮಾರ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net