

ಸಿದ್ದಾಪುರ: ಚುಮುಚುಮು ಚಳಿಯ ವಾತಾವರಣ… ಮಕ್ಕಳು, ಮಹಿಳೆಯರು, ಯುವಕರು ವೃದ್ಧರ ಕುಗ್ಗದ ಉತ್ಸಾಹ… ಕಿಲೋ ಮೀಟರ್‌ಗಟ್ಟಲೆ ದೂರ ಬರಿಗಾಲಲ್ಲಿ ಓಡುತ್ತ ಗಮನ ಸೆಳದ ಸ್ಥಳೀಯ, ರಾಜ್ಯ, ಅಂತಾರಾಜ್ಯ, ಅಂತಾರಾಷ್ಟ್ರೀಯ ಕ್ರೀಡಾಪಟುಗಳು…
ಇದು ಕೂರ್ಗ್ ವೆಲ್‌ನೆಸ್ ಫೌಂಡೇಷನ್ ಹಾಗೂ ನಟ, ನಿರ್ಮಾಪಕ ಮಿಲಿಂದ್ ಸೋಮನ್ ಅವರ ಆಶ್ರಯದಲ್ಲಿ ಭಾನುವಾರ ಪಾಲಿಬೆಟ್ಟದ ಟಾಟಾ ಸ್ಪೋರ್ಟ್ಸ್ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವದ ಮೊದಲ ಬರಿಗಾಲಿನ ಮ್ಯಾರಥಾನ್‌ನ 7ನೇ ಆವೃತ್ತಿಯ ಸ್ಪರ್ಧೆಯ ದೃಶ್ಯಗಳು.
ಬರಿಗಾಲಿನ ಓಟವನ್ನು ನೈಸರ್ಗಿಕ ಓಟ ಎಂದೂ ಕರೆಯುದುಂಟು. ಕೆಲ ಪಾಶ್ಚಿಮಾತ್ಯ ದೇಶಗಳಲ್ಲಿ ಬರಿಗಾಲಿನ ಓಟ ಜನಪ್ರಿಯತೆ ಗಳಿಸಿದ್ದು, ಪಾಲಿಬೆಟ್ಟದಲ್ಲಿ ನಡೆದ ಬರಿಗಾಲಿನ ಮ್ಯಾರಥಾನ್ ಕ್ರೀಡಾಪ್ರೇಮಿಗಳ ಮನಗೆದ್ದಿತು.
ಮ್ಯಾರಥಾನ್‌ನಲ್ಲಿ ಅಮೆರಿಕ, ಸಿಂಗಾಪುರ್, ಕೇರಳ, ತಮಿಳುನಾಡು, ದೆಹಲಿ, ಮುಂಬೈ ಹಾಗೂ ರಾಜ್ಯದ ವಿವಿಧ ಜಿಲ್ಲೆಯಿಂದ ಕ್ರೀಡಾಪಟಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಅಮೆರಿಕದಲ್ಲಿ ವಾಸವಿರುವ ಬುಟ್ಟಿಯಂಡ ಜಾಜಿ ಕೊಡಗಿನ ನಿವಾಸಿ ಅಬ್ರಾಮ್, ಐಲೆರ್ಂಡ್ ವಾಸವಿರುವ ದೇಶದ ಸಮರ್ಥ, ಸಿಂಗಾಪುರ್‌ನಲ್ಲಿರುವ ವಿದ್ಯಾ ಆದರ್ಶ್ ಕೇರಳದ ಸುರೇಶ್ ಬಾಬು ಸೇರಿದಂತೆ 375ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಬೆಳ್ಳಂಬೆಳಗ್ಗೆ ಕಾಡುಪ್ರಾಣಿಗಳ ಭಯದ ನಡುವೆಯೂ ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರ, ರಕ್ಷಣೆಯೊಂದಿಗೆ ಪಾಲಿಬೆಟ್ಟ, ಚನ್ನಯ್ಯನಕೋಟೆ, ಚನ್ನಂಗಿ, ಅಬ್ಬೂರ್ ಸುತ್ತಮುತ್ತಲ ರಸ್ತೆಗಳಲ್ಲಿ ಬರಿಗಾಲಿನಲ್ಲಿ ನಡೆದ ಮ್ಯಾರಥಾನ್‌ನಲ್ಲಿ 5 ರಿಂದ 42 ಕಿ.ಮೀ ವರೆಗಿನ ವಿವಿಧ ವಿಭಾಗಗಳಲ್ಲಿ ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಗುರಿ ಮುಟ್ಟಿದ ವೀಜೇತರು ಪ್ರಶಸ್ತಿ, ನಗದು ಬಹುಮಾನ ಪಡೆದುಕೊಂಡರು.
ನಟ, ನಿರ್ಮಾಪಕ ಮಿಲಿಂದ್ ಸೋಮನ್ ಬರಿಗಾಲಿನ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿ, ದೇಶದ ವಿವಿಧ ಭಾಗಗಳ ನೂರಾರು ಮಂದಿ ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಪರಿಸರ, ಆರೋಗ್ಯ ಕಾಳಜಿಯ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮ್ಯಾರಥಾನ್ ಸಹಕಾರಿಯಾಗಿದ್ದು, ಎಲ್ಲರೂ ನಡಿಗೆ, ವ್ಯಾಯಾಮದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕೂರ್ಗ್ ವೆಲ್ಲೆಸ್ ಫೌಂಡೇಶನ್ ಸ್ಥಾಪಕಿ ಚೆಪ್ಪುಡಿರ ನಿಕ್ಕಿ ಪೊನ್ನಪ್ಪ ಮಾತಮಾಡಿ, ವಿಶ್ವದ ಏಕೈಕ ಬರಿಗಾಲಿನ ಮ್ಯಾರಥಾನ್ ಇದಾಗಿದ್ದು, ಆರೋಗ್ಯ ಹಾಗೂ ಪರಿಸರ ಕಾಳಜಿಯನ್ನು ಮುಂದಿಟ್ಟುಕೊಂಡು 2014ರಲ್ಲಿ ಸ್ಥಾಪಿಸಿದ ಕೂರ್ಗ್ ವೆಲ್ಲೆಸ್ ಫೌಂಡೇಶನ್ ವನ್ಯಜೀವಿ, ಪರಿಸರ ಸಂರಕ್ಷಣೆ, ಆರೋಗ್ಯ ಕಾಳಜಿಯೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಜೀರೋ ಪ್ಲಾಸ್ಟಿಕ್ ಚಿಂತನೆ: ಪ್ರತಿ ವರ್ಷದಂತೆ ಈ ವರ್ಷ ಜೀರೋ ಪ್ಲಾಸ್ಟಿಕ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಮ್ಯಾರಥನ್‌ನಲ್ಲಿ ಭಾಗವಹಿಸಿದವರಿಗೆ ತೆಂಗಿನ ಚಿಪ್ಪಿನಲ್ಲಿ ನೀರನ್ನು ನೀಡಲಾಯಿತು. ಧ್ವನಿವರ್ಧಕಗಳಿಲ್ಲದೆ ಮತ್ತು ವಿದ್ಯುತ್ ಬಳಸದೆ ‘ವಲ್ಲಗ’ ಎಂದು ಕರೆಯಲ್ಪಡುವ ಜಾನಪದ ಸಂಗೀತದೊಂದಿಗೆ ಅಭ್ಯಾಸವು ಆರಂಭಿಸಿದ್ದು ವಿಶೇಷವಾಗಿತ್ತು. ಪಾಲಿಬೆಟ್ಟದ ಚೆಶೈರ್ ಹೋಮ್ ವಿಶೇಷ ಶಾಲೆಯ ವಿದ್ಯಾರ್ಥಿಗಳು ಮ್ಯಾರಥಾನ್‌ನಲ್ಲಿ ಪಾಲ್ಗೊಂಡ ನಂತರ ವಾಲಗಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಸ್ಪರ್ಧೆಯ ವಿಜೇತರು: 4 ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ನಗದು 13,500 ರೂ. ಹಾಗೂ ಪ್ರಶಸ್ತಿ. ದ್ವಿತೀಯ ಬಹುಮಾನದ ಮೊತ್ತ 9 ಸಾವಿರ ರೂ., ತೃತೀಯ 4,500 ರೂ. ನಿಗದಿಪಡಿಸಲಾಗಿತ್ತು. 42 ಕಿ.ಮೀ ಬರಿಗಾಲು ಮ್ಯಾರಥಾನ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ವಿರಾಜಪೇಟೆ ಗೌತಮ್ಶೆಟ್ಟಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟದ ನಗದು ಪ್ರಶಸ್ತಿ ತನ್ನದಾಗಿಸಿಕೊಂಡರು. ದ್ವಿತೀಯ ಬಹುಮಾನವನ್ನು ಬೆಂಗಳೂರು ಬೊಬ್ಬಯ್, ತೃತೀಯ ಬಹುಮಾನವನ್ನು ಮೈಸೂರು ಧನುಪ್ರಕಾಶ್ ಪಡೆದರು.
21 ಕಿ.ಮೀ. ಪುರುಷರ ವಿಭಾಗದಲ್ಲಿ ನಿತಿನ್ ಪ್ರಥಮ ಬಹುಮಾನ, ವಿನಯ್ ಕುಮಾರ್ ದ್ವಿತೀಯ ಬಹುಮಾನ, ತೃತೀಯ ಬಹುಮಾನವನ್ನು ಜಗದೀಶ್ ಪಡೆದರೆ, ಮಹಿಳಾ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ವಿಜಯಾ, ದ್ವಿತೀಯ ಬಹುಮಾನ ಪಲ್ಲವಿ, ದಿವ್ಯಾ ತೃತಿಯ ಬಹುಮಾನ ಪಡೆದರು. 10 ಕಿ.ಮೀ. ಪುರುಷರ ವಿಭಾದಲ್ಲಿ ಜಗದೀಶ್ ಪ್ರಥಮ ಬಹುಮಾನ, ಗಣೇಶ್ ದ್ವಿತೀಯ ಬಹುಮಾನ, ವಿಷ್ಣು ತೃತೀಯ ಬಹುಮಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಅನುಪಮಾ ರಾವ್, ದ್ವಿತೀಯ ಬಹುಮಾನವನ್ನು ಮೀರಾ, ತೃತೀಯ ಬಹುಮಾನವನ್ನು ಕುಂಕುಂ ನಾಣಯ್ಯ ಪಡೆದರು.
5 ಕಿ.ಮೀ.ನ ಪುರುಷ ವಿಭಾಗದಲ್ಲಿ ಸ್ಟೇಜ್ಮಾನ್ ಪ್ರಥಮ ಬಹುಮಾನ, ಮೆರ್ಲಿನ್ ದ್ವಿತೀಯ ಬಹುಮಾನ, ಶಾಜಿ ತೃತೀಯ ಬಹುಮಾನ ಹಾಗೂ ಮಹಿಳಾ ವಿಭಾಗದ ಪ್ರಥಮ ಬಹುಮಾನ, ಚೊಂದಮ್ಮ, ಶಿವಾನಿ ದ್ವಿತೀಯ ಬಹುಮಾನ, ಪ್ರತಿಕ್ಷಾ ತೃತೀಯ ಬಹುಮಾನ ಪಡೆದುಕೊಂಡರು.