

ಬೆಂಗಳೂರು: ಪ್ರತಿ ವರ್ಷ ಜನವರಿಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸುತ್ತಿದ್ದ 'ಚಿತ್ರಸಂತೆ' ಈ ಬಾರಿ ಮಾರ್ಚ್ನಲ್ಲಿ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಆನ್ಲೈನ್ ಮೂಲಕ ಚಿತ್ರಸಂತೆ ನಡೆಸಲು ಪರಿಷತ್ತು ನಿರ್ಧರಿಸಿತ್ತು. ಕರೊನಾ ಪ್ರಕರಣಗಳು ಇಳಿಮುಖವಾಗಿದ್ದು, ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿರುವುದರಿಂದ ಭೌತಿಕವಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಅನುಮತಿ ನೀಡುವ ಭರವಸೆ ದೊರೆತಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ತಿಳಿಸಿದ್ದಾರೆ.
ಸರ್ಕಾರದ ಅನುಮತಿ ದೊರೆತಲ್ಲಿ ಆನ್ಲೈನ್- ಆಫ್ಲೈನ್ ಎರಡೂ ವಿಧಾನಗಳಲ್ಲೂ ಚಿತ್ರಸಂತೆ ನಡೆಸಲಾಗುವುದು. ಈ ಬಾರಿ ದೇಶದ ವಿವಿಧ ಭಾಗಗಳಿಂದ 800ಕ್ಕೂ ಹೆಚ್ಚು ಕಲಾವಿದರು ಅರ್ಜಿ ಸಲ್ಲಿಸಿದ್ದಾರೆ ಎಂದು ಡಾ.ಬಿ.ಎಲ್.ಶಂಕರ್ ಹೇಳಿದ್ದಾರೆ.