

ಮಂಗಳೂರು: ಬೆಂಗಳೂರಿನ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಆಟೋ ಚಾಲಕರಾದ ರಮೇಶ್ ಮತ್ತು ಪ್ರಶಾಂತ್ರ ಸಮಯ ಪ್ರಜ್ಞೆಯಿಂದ ಪತ್ತೆಯಾಗಿದ್ದಾರೆ.
ಸದ್ಯ ಮಂಗಳೂರಿನಲ್ಲಿ ಪತ್ತೆಯಾಗಿರುವ ಮಕ್ಕಳನ್ನು ಅಮೃತವರ್ಷಿಣಿ, ಭೂಮಿ, ಚೇತನ್, ರಾಯನ್ ಎಂದು ಪಾಂಡೇಶ್ವರ ಪೊಲೀಸರು ಖಚಿತ ಪಡಿಸಿದ್ದಾರೆ. ಮಕ್ಕಳು ಮಂಗಳೂರಿನಲ್ಲಿ ಅಂಬೇಡ್ಕರ್ ವೃತ್ತದ ಬಳಿ ಪತ್ತೆಯಾಗಿದ್ದು, ನಗರದಲ್ಲಿದ್ದ ಮಕ್ಕಳನ್ನು ರಿಕ್ಷಾ ಚಾಲಕರು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಎರಡು ದಿನದ ಹಿಂದೆ ಸೋಲದೇವನಹಳ್ಳಿಯ ಕ್ರಿಟನ್ ಕುಶಾಲ್ ಅಪಾರ್ಟ್ಮೆಂಟ್ನಿಂದ ಈ ಮಕ್ಕಳು ಕಾಣೆಯಾಗಿದ್ದರು. ಈ ಬಗ್ಗೆ ಬೆಂಗಳೂರು ಪೊಲೀಸರು ವಿಶೇಷ ತಂಡ ರಚನೆ ಮಾಡಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದರು.
ಬೆಂಗಳೂರಿನಿಂದ ಸ್ಲಿಪರ್ ಬಸ್ನಲ್ಲಿ ಮಂಗಳೂರು ತಲುಪಿದ್ದ ಮಕ್ಕಳು ಆಟೋ ಹತ್ತಿದ್ದರು. ಎಲ್ಲಿಗೆ ಹೋಗಬೇಕು ಎಂದು ಸರಿಯಾಗಿ ಮಾಹಿತಿ ಹೇಳದಿದ್ದಕ್ಕೆ ಅನುಮಾನಗೊಂಡ ರಿಕ್ಷಾ ಚಾಲಕರು, ಪಾಂಡೇಶ್ವರ ಪೊಲೀಸ್ ಠಾಣೆಗೆ ಮಕ್ಕಳನ್ನು ಕರೆತಂದು ಬಿಟ್ಟಾಗ ಬೆಂಗಳೂರಲ್ಲಿ ನಾಪತ್ತೆಯಾಗಿದ್ದ ಮಕ್ಕಳೇ ಇವರು ಎಂದು ಗೊತ್ತಾಗಿದೆ.
ಮೊದಲು ಬೆಂಗಳೂರಿಂದ ರೈಲು ಮೂಲಕ ಬೆಳವಾವಿ ಹೋಗಿದ್ದ ಈ ಮಕ್ಕಳು, ಅಲ್ಲಿಂದ ಮೈಸೂರಿಗೆ ಬಂದು ಮತ್ತೆ ಬೆಂಗಳೂರಿಗೆ ಹೋಗಿ ಸೋಮವಾರ ಸಂಜೆ ಸಂಜೆ ಮೆಜೆಸ್ಟಿಕ್ನಿಂದ ಮಂಗಳೂರಿಗೆ ಬಂದಿದ್ದರು ಎಂದು ಗೊತ್ತಾಗಿದೆ.