ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾರೀ ವಾಹನಗಳಿಗೆ ನಿರ್ಬಂಧ!

New Project(22)
Published on

ಚಾಮರಾಜನಗರ: ಹನೂರು ತಾಲೂಕಿನ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ 6ಕ್ಕಿಂತ ಹೆಚ್ಚಿನ ಚಕ್ರಗಳನ್ನು ಹೊಂದಿರುವ ಭಾರಿ ವಾಹನಗಳ ರಾತ್ರಿ ಸಂಚಾರಕ್ಕೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

6 ಚಕ್ರಗಳನ್ನು ಹೊಂದಿರುವ ವಾಹನಗಳ (ಲಾರಿ) ಸಂಚಾರವನ್ನು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು, ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಅಗತ್ಯ ವಸ್ತುಗಳ ಸಾಗಾಣಿಕೆ ವಾಹನ, ಅಗ್ನಿಶಾಮಕ ವಾಹನ, ಆಂಬುಲೆನ್ಸ್, ರಾಜ್ಯ ಹಾಗೂ ಹೊರರಾಜ್ಯದ ಸಾರ್ವಜನಿಕ ವಾಹನಗಳಾದ ಸರ್ಕಾರಿ- ಖಾಸಗಿ ಬಸ್‌ಗಳು, ಸರ್ಕಾರಿ ಇತರ ಎಲ್ಲ ರೀತಿಯ ಲಘು ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶವಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಾತ್ರಿ ಸಂಚಾರ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಎಲ್ಲ ಮಾದರಿಯ ವಾಹನಗಳು ಮಲೆ ಮಹದೇಶ್ವರ ಬೆಟ್ಟದ ಮಾರ್ಗವಾಗಿ ತಮಿಳುನಾಡಿಗೆ ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಮತ್ತು ಮಲೆ ಮಹದೇಶ್ವರ ಬೆಟ್ಟದಿಂದ ಪಾಲಾರ್‌ವರೆಗಿನ ರಸ್ತೆಯು ಕಡಿದಾದ ತಿರುವಿನಿಂದ ಕೂಡಿದ್ದು, ಭಾರಿ ವಾಹನಗಳ ಸಂಚಾರದಿಂದ ರಸ್ತೆಯಲ್ಲಿ ಸಂಚಾರ ದಟ್ಟಣೆಯಾಗಿದೆ.

ಇದರಿಂದ ಶ್ರೀ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರ, ಸಾರ್ವಜನಿಕರ, ಸರ್ಕಾರದ ಹಾಗೂ ತುರ್ತು ವಾಹನಗಳ ಸುಗಮ ಸಂಚಾರವೂ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1988ರ ಸೆಕ್ಷನ್ 115, ಕರ್ನಾಟಕ ಮೊಟಾರು ವಾಹನಗಳ ನಿಯಾಮಾವಳಿ- 1989ರ ನಿಯಮ 221-ಎ(5)ರ ಹಾಗೂ ಕರ್ನಾಟಕ ಸಂಚಾರ ನಿಯಂತ್ರಣ ಕಾಯ್ದೆ 1960ರ ಸೆಕ್ಷನ್ 3ರ ಪ್ರಕಾರ ಮುಂದಿನ ಆದೇಶದವರೆಗೆ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಧ್ವನಿ ಎತ್ತಿದ ಶಾಸಕ, ಸಚಿವರ ಸೂಚನೆ: ತಮಿಳುನಾಡಿನ ದಿಂಬಂ ಘಾಟ್‌ನಲ್ಲಿ ರಾತ್ರಿ ಸಂಚಾರ ನಿಷೇಧಿಸಿದ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದ ರಸ್ತೆಗಿಳಿಯುತ್ತಿರುವ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೆರೆ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳ ಸಂಬಂಧ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ವಸತಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಾರಿ ವಾಹನಗಳು ಸಂಚರಿಸಲು ಅವಕಾಶ ನೀಡಕೂಡದು ಎಂದು ಸೂಚನೆ ಕೊಟ್ಟರು.

ಸಭೆಯಲ್ಲಿ ಕ್ಷೇತ್ರದ ಸಮಸ್ಯೆ ಬಗ್ಗೆ ಶಾಸಕ ಆರ್.ನರೇಂದ್ರ ಮಾತನಾಡಿ, ಕರಿಕಲ್ಲು ತುಂಬಿದ ಭಾರಿ ವಾಹನಗಳು ದಿಂಬಂ ರಸ್ತೆ ಸಂಚಾರ ನಿಷೇಧದ ಬಳಿಕ ತಮಿಳುನಾಡಿಗೆ ಹೋಗಲು ಮಲೆ ಮಹದೇಶ್ವರ ಬೆಟ್ಟದ ಮಾರ್ಗ ಹಿಡಿದಿವೆ. ಇದರಿಂದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಬೆಟ್ಟಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇದ್ದು, ಪ್ರಾಣಾಹಾನಿಯಾಗುತ್ತಿದೆ. ತಕ್ಷಣ ಭಾರಿ ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ವಿ.ಸೋಮಣ್ಣ, ಮಲೆ ಮಹದೇಶ್ವರ ಬೆಟ್ಟದ ಕಡೆಯಿಂದ ಸಂಚರಿಸುವ ಭಾರಿ ವಾಹನಗಳಿಗೆ ಕಡಿವಾಣ ಹಾಕಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಕ್ಷಣ ಆದೇಶ ಹೊರಡಿಸಿ ಎಂದು ಸೂಚನೆ ನೀಡಿದರು.

ಒಂದು ಭಾರಿ ವಾಹನ ಹೋದರೂ ಎಸ್ಪಿ ಹೊಣೆ: ಮಹದೇಶ್ಚರ ಬೆಟ್ಟದ ರಸ್ತೆಯಲ್ಲಿ ಭಾರಿ ಗಾತ್ರದ ಒಂದು ಲಾರಿ ಬಂದು ತೊಂದರೆಯಾದರೂ ಎಸ್ಪಿ ಹೊಣೆಯಾಗುತ್ತಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಈ ಬಗ್ಗೆ ಕ್ರಮ ವಹಿಸಿ. ಚೆಕ್‌ಪೋಸ್ಟ್ ತೆರೆದು ಪರಿಶೀಲನೆ ಮಾಡಬೇಕು. ಅಲ್ಲಿ ಹಣ ವಸೂಲಿ ಮಾಡುವಂತ ಘಟನೆಗಳು ಜರುಗಬಾರದು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net