

ಹಗರೆ: ಕೃಷಿಯಲ್ಲಿ ಮುಂದೊಂದು ದಿನ ಬದುಕು ಕಟ್ಟಿಕೊಳ್ಳಬಹುದು ಎಂಬ ಭರವಸೆಯೊಂದಿಗೆ ಬಿಕಾಂ ಪದವೀಧರನೊಬ್ಬ ಇದೀಗ ಕೃಷಿಕನಾಗಿ ನೆಮ್ಮದಿ ಜೀವನ ನಡೆಸುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾನೆ.
ಬಿಕ್ಕೊಡು ಹೋಬಳಿಯ ಡನಾಯ್ಕನಹಳ್ಳಿಯ ಡಿ.ಎಚ್.ಭೂಮೇಶ್ ಹತ್ತು ವರ್ಷವಿರುಗಾವಲೇ ತಂದೆ ಡಿ.ವಿ.ಹರೀಶ್ ಅವರನ್ನು ಕಳೆದುಕೊಂಡರು. ಬಳಿಕ ತಾಯಿಯ ಸಹಕಾರದಿಂದ ವಿದ್ಯಾಭ್ಯಾಸ ಮುಂದುವರಿಸಿ ಈಗ ಬಿ.ಕಾಂ. ಪದವೀಧರನಾಗಿದ್ದಾರೆ. ಅನಿವಾರ್ಯವಾಗಿ ಕೃಷಿಯಲ್ಲಿ ತೊಡಗಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.
ಪದವಿ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ಆರಂಭಿಸಿದ ನಂತರ ಕೆಲವು ಕಡೆ ಉದ್ಯೊಗ ಮಾಡಿದರಾದರೂ ಇದೀಗ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಈತನ ಪತ್ನಿ ಅನಿತಾ ಸಹ ಎಂ.ಬಿ.ಎ ಪದವೀಧರೆಯಾಗಿದ್ದು, ಪತಿಯ ಕೃಷಿ ಕಾರ್ಯಕ್ಕೆೆ ಬೆನ್ನೆಲುಬಾಗಿ ನಿಂತಿದ್ದಾರೆ.
ತಮಗಿರುವ ಫಲವತ್ತಾದ ಹತ್ತು ಎಕರೆ ನೀರಾವರಿ ಜಮೀನಿನಲ್ಲಿ ಎರಡು ಎಕರೆಯಲ್ಲಿ ಅಡಕೆ ಗಿಡಗಳನ್ನು ನೆಟ್ಟು ಐದು ವರ್ಷಗ ಳಾಗಿದ್ದು, ಆದಾಯ ನೋಡುವ ತವಕದಲ್ಲಿದ್ದಾರೆ. ಇನ್ನು ಒಂದೂವರೆ ಎಕರೆ ಜಾಗದಲ್ಲಿ ತೆಂಗು ಬೆಳೆದಿದ್ದಾರೆ. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ದೂರವಿದ್ದಾರೆ. ಇನ್ನುಳಿದಂತೆ ಪ್ರತಿ ವರ್ಷ ಎಲೆ ಕೋಸು, ಮೆಣಸಿನ ಕಾಯಿ, ಟೊಮ್ಯಾಟೊ, ಬೀನ್ಸ್ ಬೆಳೆಯುವ ಮೂಲಕ ಆದಾಯ ಕಂಡುಕೊಂಡಿದ್ದಾರೆ.
ಭೂಮಿ ತಾಯಿ ಮೇಲೆ ನಂಬಿಕೆಯಿಟ್ಟು ಬೆಳೆ ಬೆಳೆಯಲಾಗುತ್ತದೆ. ಉತ್ತಮವಾಗಿ ಬೆಳೆಯಾದರೆ ಉತ್ತಮ ಆದಾಯ ಹೊಂದಬಹುದು ಎಂಬುದು ಭೂಮೇಶ್ ನಂಬಿಕೆ. ಇದರ ಆಧಾರದಡಿ ಮೂರು ವರ್ಷಗಳಿಂದ ಶುಂಠಿ ಬೆಳೆಯುತ್ತಿದ್ದು ರೋಗ ರಹಿತ ಬೆಳೆಯೊಂದಿಗೆ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಬೆಲೆ ಏರಿಳಿತದ ನಡುವೆ ಎಂಟು ಲಕ್ಷ ರೂ. ಖರ್ಚು ಮಾಡಿ 16 ಲಕ್ಷ ರೂ. ಪಡೆದಿರುವ ಇವರು, ಎಂಟು ಲಕ್ಷ ರೂ. ಆದಾಯ ಪಡೆದುಕೊಂಡಿದ್ದಾರೆ.
ಇನ್ನು ಎರಡು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುವ ಇವರು ಇದಕ್ಕಾಗಿ ಯಂತ್ರೋಪಕರಣಗಳ ಬಳಕೆ ಮಾಡುತ್ತಾರೆ. ಒಂದೆಡೆ ಬಾಡಿಗೆ ಬೆಲೆ ದುಬಾರಿಯಾದರೆ ಮತ್ತೊಂದೆಡೆ ಕೂಲಿ ಕಾರ್ಮಿಕರ ಕೊರತೆ. ಇನ್ನು ಭತ್ತ ಬೆಳೆದು ಮನೆಗೆ ತರುವಷ್ಟರಲ್ಲಿ ಖರ್ಚಿಗೆ ಸಮವಾಗುತ್ತದೆ ಎಂಬುದು ಕೃಷಿಕರ ಮಾತು. ಇಷ್ಟಾದರೂ ಖರ್ಚನ್ನು ಲೆಕ್ಕಿಸದೆ ಭತ್ತ ಬೆಳೆಯುತ್ತಾರೆ. ಮನೆ ಉಪಯೋಗಕ್ಕೆಂದು ಒಂದಷ್ಟು ಇಟ್ಟುಕೊಂಡು ಉಳಿದದ್ದನ್ನು ಮಾರಾಟ ಮಾಡುವ ಮೂಲಕ ಆದಾಯ ಕಂಡುಕೊಂಡಿದ್ದಾರೆ. ಅಂತೆಯೇ ಮುಸುಕಿನ ಜೋಳವನ್ನು ಪ್ರತಿ ವರ್ಷ ಬೆಳೆಯುವ ಇವರು ಯಾವ ವರ್ಷವೂ ಸಹ ನಷ್ಟ ಅನುಭವಿಸಿಲ್ಲ. ಇತ್ತೀಚಿನ ದಿನಗಳಲ್ಲಿ ರೋಗಬಾಧೆ ಹೆಚ್ಚಾದ ಕಾರಣ ಲಾಭಾಂಶ ಕಡಿಮೆಯಾಗಿದೆ ಎಂಬುದು ಮಾತ್ರ ಬೇಸರದ ಸಂಗತಿ. ಜಮೀನಿನಲ್ಲಿ ಕೊಳವೆ ಬಾವಿ ಇದ್ದು ಸಾಕಷ್ಟು ನೀರಿದೆ. ಜಮೀನಿಗೆ ಪೈಪ್‌ಲೈನ್ ಸಂಪರ್ಕ ಕಲ್ಪಿಸಿದ್ದು, ಮನೆಗೆ ಬೇಕಾಗುವ ಸೊಪ್ಪು , ತರಕಾರಿಗಳನ್ನು ತಾಯಿ ಹಾಗೂ ಪತ್ನಿ ಅನಿತಾ ಬೆಳೆಯುತ್ತಾರೆ.
ಎಲೆಕೋಸು ಬೆಳೆ ಲಾಟರಿ ಇದ್ದ ಹಾಗೆ. ಬೆಳೆ ಎಷ್ಟೇ ಚೆನ್ನಾಗಿ ಬಂದರೂ ಕೆಲವೊಮ್ಮೆ ಬೆಲೆ ದಿಢೀರ್ ಕುಸಿತಗೊಳ್ಳುವುದು ಮಾಮೂಲು. ಆದರೂ ಸಹ ಕೆಲವೊಮ್ಮೆ ರೈತನ ಕೈ ಹಿಡಿಯಲಿದೆ ಎಂಬುದು ಹಲವು ಬಾರಿ ಸಾಬೀತಾಗಿದೆ. ಹೀಗಾಗಿ ಪ್ರತಿ ವರ್ಷ ಒಂದು ಎಕರೆಯಲ್ಲಿ ಎಲೆಕೋಸು ಬೆಳೆಯುತ್ತಾರೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಧಾರಣೆ ಯಾಥಾಸ್ಥಿತಿ ಇರುವುದು ಕಮ್ಮಿ. ಕೆಲವೊಮ್ಮೆ ಹೆಚ್ಚಾದರೆ ಕೆಲವೊಮ್ಮೆ ಕಮ್ಮಿಯಾಗುತ್ತದೆ. ಆದರೆ ನಷ್ಟವಂತೂ ಆಗಿಲ್ಲ. ವಾತಾವರಣದಲ್ಲಾಗುವ ಬದಲಾವಣೆ ನೋಡಿಕೊಂಡು ಬೆಳೆ ಬೆಳೆಯುವುದು ಸೂಕ್ತ ಎಂಬುದು ಭೂಮೇಶ್ ಅವರ ಅನುಭವದ ಮಾತು.
ಕೃಷಿಯಲ್ಲಿ ಸಾಧನೆ ಮಾಡಿಲ್ಲ ಎನ್ನುವ ಭೂಮೇಶ್ ಮುಂದಿನ ದಿನಗಳಲ್ಲಿ ಸಮಗ್ರ ಸಾವಯವ ಕೃಷಿ ಮಾಡಬೇಕೆಂಬ ಮಹಾದಾಸೆ ಹೊಂದಿದ್ದಾರೆ. ಮಣ್ಣು ಪರೀಕ್ಷೆ ಮಾಡಿಸಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂಬ ತವಕದಲ್ಲಿರುವ ಇವರು, ಹಸುಗಳನ್ನು ಸಾಕಿ ಹಾಲು ಉತ್ಪಾದಿಸಬೇಕೆಂದು ಕನಸನ್ನೂ ಕಟ್ಟಿಕೊಂಡಿದ್ದಾರೆ.
ತಂದೆ ಹುಟ್ಟು ಹೋರಾಟಗಾರರಾಗಿದ್ದು ರೈತರಿಗಾಗಿ ಸೆರೆಮನೆ ವಾಸ ಅನುಭವಿಸಿದ್ದಾರೆ. ಹಾಸನ ಜಿಲ್ಲೆಯ ರೈತ ಸಂಘದ ಸಂಚಾಲಕರಾಗಿದ್ದ ಡಿ.ವಿ.ಹರೀಶ್ ಜಿಲ್ಲೆಯಲ್ಲಿ ಎಲ್ಲರಿಗೂ ಚಿರಪರಿಚಿತರು. ಇದೀಗ ತಂದೆಯ ಹಾದಿಯನ್ನೇ ತುಳಿದಿರುವ ಭೂಮೇಶ್ ಉದ್ಯೋಗ, ಕೃಷಿ ಕೆಲಸದೊತ್ತಡದ ನಡುವೆಯೂ ಕೃಷಿಕರಿಗಾಗಿ ತನ್ನ ಸಮಯವನ್ನು ಮೀಸಲಿಟ್ಟು ಹೋರಾಟ ಮಡುತ್ತಾರೆ. ಈಗಾಗಲೇ ರೈತ ಸಂಘದ ಸದಸ್ಯನಾಗಿರುವ ಭೂಮೇಶ್ ಅನ್ಯಾಯ ಹಾಗೂ ನ್ಯಾಯದ ಪರವಾದ ಹೋರಾಟಗಳಲ್ಲಿ ಹಿರಿಯರೊಂದಿಗೆ ಕಾಣಿಸಿಕೊಳ್ಳುತ್ತಾರೆ.
ಎಲ್ಲರೂ ಉದ್ಯೋಗ ಮಾಡಬಹುದು. ಆದರೆ ರೈತನಾಗಲು ಸಾಧ್ಯವಿಲ್ಲ. ಕೃಷಿಕನಾಗುವ ಯೋಗ ನನ್ನಲ್ಲಿದೆ. ನಾನೊಬ್ಬ ಜವಾಬ್ದಾರಿಯುತ ಸಮಗ್ರ ಯಶಸ್ವಿ ರೈತನಾಗಬೇಕೆಂಬ ಆಸೆಯಿದೆ. ನನ್ನ ಕಾರ್ಯಕ್ಕೆ ತಾಯಿ ಹಾಗೂ ಪತ್ನಿಯ ಸಹಕಾರವಿದೆ. ತಂದೆಯ ಹೋರಾಟ ನಿಲ್ಲಬಾರದೆಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ರೈತ ಪರ ಹೋರಾಟಗಾರನಾಗಬೇಕೆಂಬ ಬಯಕೆಯಿದ್ದು, ಕೃಷಿಕರಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ನಿಲುವು ನನ್ನದು.
ಭೂಮೇಶ್ ಯುವ ರೈತ, ಡನಾಯ್ಕನಹಳ್ಳಿ