ಮನೆಗೆ ಹೋಗುವ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ನಿಂತ ಕ್ಷಣಾರ್ಧದಲ್ಲೇ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

accident death
Published on

ನೆಲಮಂಗಲ: ಜವರಾಯ ಯಾವಾಗ? ಯಾವ ರೂಪದಲ್ಲಿ ಬರ್ತಾನೆ ಎಂದು ಊಹಿಸೋಕು ಆಗಲ್ಲ. ಆಟೋ ಚಾಲಕರಿಬ್ಬರು ಮನೆಗೆ ಹೋಗುವ ಮಾರ್ಗಮಧ್ಯೆ ಮೂತ್ರ ವಿಸರ್ಜನೆಗೆಂದು ರಸ್ತೆಬದಿ ಆಟೋ ನಿಲ್ಲಿಸಿದ ಕ್ಷಣಾರ್ಧದಲ್ಲೇ ದುರಂತ ಅಂತ್ಯಕಂಡಿದ್ದಾರೆ.

ಇಂತಹ ಘಟನೆ ಬುಧವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಮಹದೇವಪುರ ಬಳಿಯ ಚಾಕಲೇಟ್​ ಕಾರ್ಖಾನೆ ಬಳಿ ಸಂಭವಿಸಿದೆ. ಚಕ್ಕಸಂದ್ರದ ರಮೇಶ್​(36) ಮತ್ತು ಅಡೇಪೇಟೆಯ ಉಮೇಶ್​ (35) ಮೃತ ದುರ್ದೈವಿಗಳು. ಸ್ನೇಹಿತರಾದ ಉಮೇಶ್​ ಮತ್ತು ರಮೇಶ್​ ಇಬ್ಬರೂ ಆಟೋ ಚಾಲಕರಾಗಿದ್ದರು. ಇವರಿಬ್ಬರೂ ಬುಧವಾರ ರಾತ್ರಿ 8 ಗಂಟೆಯಲ್ಲಿ ಸೋಲೂರಿಗೆ ಹೋಗಿದ್ದರು. ಅಂದು ರಾತ್ರಿ 10 ಗಂಟೆಗೆ ಗ್ರಾಮಕ್ಕೆ ವಾಪಸ್​ ಆಗುತ್ತಿದ್ದರು.

ಮಾರ್ಗ ಮಧ್ಯೆ ಮೂತ್ರವಿಸರ್ಜನೆಗೆಂದು ಚಾಕಲೇಟ್​ ಕಾರ್ಖಾನೆ ಬಳಿ ಆಟೋ ನಿಲ್ಲಿಸಿ ಕೆಳಗೆ ಇಳಿಯುತ್ತಿದ್ದರು. ಅಷ್ಟರಲ್ಲಿ ಕಾರಿನ ರೂಪದಲ್ಲಿ ಬಂದೆರಗಿದ ಜವರಾಯ, ರಮೇಶ್​ ಮತ್ತು ಉಮೇಶ್​ರ ಪ್ರಾಣ ತೆಗೆದಿದೆ.

ಕುಣಿಗಲ್​ ಕಡೆಯಿಂದ ವೇಗವಾಗಿ ಬಂದ ಕಾರು, ರಸ್ತೆಬದಿ ನಿಂತಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ರಮೇಶ್​ ಹಾಗೂ ಉಮೇಶ್​ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಚಾಲಕ ಕೃಷ್ಣ ಹಾಗೂ ಪ್ರಯಾಣಿಕ ರಾಕೇಶ್​ ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ರಮೇಶ್​ಗೆ ಒಬ್ಬ ಪುತ್ರನಿದ್ದು, ಇವರ ಪತ್ನಿ 5 ತಿಂಗಳ ಗರ್ಭಿಣಿ. ಉಮೇಶ್​ಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ. ಎರಡೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net