

ಮಂಡ್ಯ: ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಹಲವು ಗಲಾಟೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆ ಇಲ್ಲ. ಮಾತ್ರವಲ್ಲದೆ ಕಾಂಗ್ರೆಸ್ ಅಧಿಕಾರದ ಬಂದ ನಂತರ ಮುಸ್ಲಿಂಮರು ಎದ್ದು ಕುಳಿತಿದ್ದಾರೆ. ಅದಕ್ಕೆ ತಕ್ಕಂತೆ ಅವರ ಪರವಾಗಿ ಕಾಂಗ್ರೆಸ್ ನಾಯಕರು ನಿಲ್ಲುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ 95 ಪರ್ಸೆಂಟ್ ಹಿಂದುಗಳು ಇದ್ದಾರೆ. ಆದರೂ ಇಲ್ಲಿ ಕೋಮು ದಳ್ಳೂರಿ ಹಚ್ಚುತ್ತಿದ್ದಾರೆ. ಜಿಲ್ಲೆಯಲ್ಲಿ ಚುನಾಯಿತ ಪ್ರತಿನಿಧಿಗಳು ಹಿಂದು ವಿರೋಧಿ ಧೋರಣೆ ತಾಳುತ್ತಿದ್ದಾರೆ. ಕಳೆದ ವರ್ಷ ಹನುಜ ಧ್ವಜಕ್ಕೆ ಅಗೌರವ ತಂದಿದ್ದರು. ಮತ್ತೆ ಗಣೇಶ ಉತ್ಸವದ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್‌ಗಳನ್ನ ಎಸೆದಿದ್ದಾರೆ. ರಾಜ್ಯಸರ್ಕಾರನೇ ಮುಸ್ಲಿಂ ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುತ್ತಿದೆ. ಇನ್ನು ಮೂವತ್ತು ವರ್ಷದಲ್ಲಿ ಭಾರತವನ್ನ ಪಾಕಿಸ್ತಾನ ಮಾಡುತ್ತೇವೆಂದು ಈಗಾಗಲೇ ಭಯೋತ್ಪಾದಕರ ಕರ ಪತ್ರದಲ್ಲಿ ಹೇಳಿದ್ದಾರೆ ಎಂದರು.
ನಾಗಮಂಗಲ ಗಲಾಟೆ ವಿಚಾರ ನೋಡುವುದಾದರೆ ಕಳೆದ ಬಾರಿ ಕೂಡ ಗಲಾಟೆ ಆಗಿತ್ತು. ವಿಸರ್ಜನೆ ವೇಳೆ ಸರಿಯಾಗಿ ಬಂದೋಬಸ್ತ್ ಮಾಡಿದ್ದರೆ ಗಲಾಟೆ ಆಗುತ್ತಿರಲಿಲ್ಲ. ಗಲಾಟೆ ಮಾಡಿಸಿದವರು ಕಾಂಗ್ರೆಸ್‌ನವರು. ಬೆಂಕಿ ಇಟ್ಟಿದ್ದು ಅವರೆ ತಾನೇ. ಇದು ಕಾಮನ್ ಸೆನ್ಸ್ ಇಲ್ಲದ ಸರ್ಕಾರ. ನಾಗಮಂಗಲ ಪ್ರಕರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ ಅವರನ್ನ ಅಮಾನತು ಮಾಡಬೇಕಿತ್ತು. ಅದನ್ನು ಬಿಟ್ಟು ಕೆಳಹಂತದ ಅಧಿಕಾರಿಗಳನ್ನ ಅಮಾನತು ಮಾಡಿದ್ದಾರೆ. ಜನರಿಗೆ ಮೋಸ ಮಾಡುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ. ನಾವು ನಾಗಮಂಗಲಕ್ಕೆ ಬಂದು ಸಾಂತ್ವನಾ ಹೇಳಿದ್ದೇವೆಯೇ ಹೊರತು ನಾನು ಅಲ್ಲಿ ಭಾಷಣ ಮಾಡಿಲ್ಲ. ಆದಾಗ್ಯೂ ಏಕಾಏಕಿ ನನ್ನ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ತಪ್ಪು ಆಗಿದ್ದರೇ ತನಿಖೆ ಮಾಡಿ ಎನ್ನುವ ಅಧಿಕಾರ ವಿಪಕ್ಷ ನಾಯಕನಿಗೆ ಇದೆ. ಅದರಂತೆ ತನಿಖೆ ಮಾಡಿ ಎಂದು ಹೇಳಿದ್ದೆ. ಸಾಮಾಜಿಕ ಜಾಲತಾಣದ ನನ್ನ ಖಾತೆಯಲ್ಲಿಯೂ ತನಿಖೆ ಮಾಡಿ ಎನ್ನುವುದು ತಪ್ಪಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ಕೋಮುಬೀಜ ಬಿತ್ತುವ ಕೆಲಸ ಮಾಡಿದೆ. ನನ್ನ ಬಾಯಿ ಮುಚ್ಚುವ ಕೆಲಸ ಮಾಡುತ್ತಿದೆ. ನನ್ನ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿ ವಿಚಾರವಾಗಿ ಕೂಡ ಕೇಸ್ ಹಾಕಿದ್ದಾರೆ. ವಿರೋಧ ಪಕ್ಷ ಇವರು ಹೇಳಿದ ಹಾಗೆ ಕೇಳಿಕೊಂಡ ಇರಬೇಕು. ರಾಜ್ಯಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಬಿಜೆಪಿಯನ್ನ ತುಳಿಯುವ ಷಡ್ಯಂತ್ರ ನಡೆಯುತ್ತಿದೆ. ಈ ಸರ್ಕಾರ ಇರುವ ಗ್ಯಾರಂಟಿ ಇಲ್ಲ. ಅವರ ಪಾಪದಿಂದಲೇ ಸರ್ಕಾರ ಹೋಗುತ್ತದೆ. ನಮ್ಮ ಮೇಲೆ ಕೇಸ್ ಹಾಕಿದಂತೆ, ನಿಮಗೂ ಇದೇ ರೀತಿ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಶಾಸಕ ಮುನಿರತ್ನ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುನಿರತ್ನಗೆ ನೋಟಿಸ್ ಕೊಟ್ಟಿದ್ದೇವೆ. ಎಫ್‌ಎಸ್‌ಎಲ್ ವರದಿ ಬಂದ ಮೇಲೆ ಕ್ರಮ ವಹಿಸುತ್ತೇವೆ. ದೇವೇಗೌಡರ ಕುಟುಂಬವನ್ನ ಮುಗಿಸಲು ಕಾಂಗ್ರೆಸ್‌ನವರು ಸಂಚು ಮಾಡಿದ್ದರು. ಆಗ ಏಕೆ ಕಾಂಗ್ರೆಸ್‌ನ ಒಕ್ಕಲಿಗರು ಹೋರಾಟ ಮಾಡಲಿಲ್ಲ. ಅವಾಗ ಒಕ್ಕಲಿಗತನ ಏಕೆ ಪ್ರದರ್ಶನ ಮಾಡಲಿಲ್ಲ. ಇದೀಗ ಸಿದ್ದರಾಮಯ್ಯ ಅವರನ್ನ ಬದಲಾವಣೆ ಮಾಡಿ ಒಕ್ಕಲಿಗರನ್ನ ಸಿಎಂ ಮಾಡಿ. ನಾವು ಈಗಾಗಲೇ ಹೇಳಿದ್ದೇವೆ. ತಪ್ಪು ಮಾಡಿದವರು ಉಪ್ಪು ಕುಡಿಯಲೇಬೇಕು ಎಂದಿದ್ದೇವೆ. ನೀವು ರಾಜಕಾರಣ ಮಾಡುತ್ತಿದ್ದೀರಾ, ನಾವು ರಾಜಕಾರಣ ಮಾಡುತ್ತಿದ್ದೇವಾ?. ಕಾನೂನು ಮುಂದೆ ಯಾರು ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ಹಾಗೂ ಡಿಸಿಎಂ ಮೇಲೆ ಆರೋಪ ಬಂದಿದೆ. ಇವರೆಲ್ಲ ಮಾಡಲ್ ಆಗಲಿ. ಇವರೆಲ್ಲ ಸತ್ಯ ಹರಿಶ್ಚಂದ್ರರಲ್ಲವಾ?. ಆ ನಂತರ ಕುಮಾರಸ್ವಾಮಿ ಅವರಿಗೆ ಹೇಳುತ್ತೇವೆ. ಕುಮಾರಸ್ವಾಮಿ ಅವರು ಏನು ತಪ್ಪು ಮಾಡಿದ್ದಾರೆ. ಹೋರಾಟ ಮಾಡಿದರೆ, ಸರ್ಕಾರವನ್ನ ಟೀಕೆ ಮಾಡಿದರೆ ಕೇಸ್ ಹಾಕುತ್ತಾರೆ ಎಂದ ಅವರು, ತಿರುಪತಿ ಲಡ್ಡು ಅಪವಿತ್ರ ವಿಚಾರದಿಂದಾಗಿ ನಮಗೂ ನೋವು ಆಗಿದೆ. ತಿರುಪತಿ ಹಿಂದುಗಳ ಆರಾದ್ಯ ದೈವ. ಆ ರೀತಿ ಮಾಡಿದ್ದರೇ ಕ್ರಮ ತೆಗೆದುಕೊಳ್ಳಬೇಕು ಎಂದರು.
ಸದಸ್ಯತ್ವ ಅಭಿಯಾನಕ್ಕೆ ಚಾಲನೆ: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಚಾಲನೆ ನೀಡಿದರು. ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಶ್ರೀಧರ್ ಇತರರಿದ್ದರು.