

ಮಂಗಳೂರು: ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಅವರ ಕೊಲೆಗೆ ದಿವಂಗತ ಮುತ್ತಪ್ಪ ರೈ ಅವರ ಅಕ್ಕನ ಮಗ ಸಂಚು ರೂಪಿಸಿದ್ದ ಸಂಗತಿ ಹೊರಬಿದ್ದಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಂಗಳೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇಂದು(ಬುಧವಾರ)ಮಂಗಳೂರು ಸಿಸಿಬಿ ಕಚೇರಿಗೆ ಹಾಜರಾದ ಗುಣರಂಜನ್ ಶೆಟ್ಟಿ ಅವರು ದೂರಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಬಂದ ಗುಣರಂಜನ್ ಅವರಿಂದ ಕಮಿಷನರ್ ಎನ್.ಶಶಿಕುಮಾರ್ ವಿವರಣೆ ಪಡೆದಿದ್ದಾರೆ.
ಭೂಗತ ಲೋಕದ ಮಾಜಿ ಡಾನ್, ದಿವಂಗತ ಮುತ್ತಪ್ಪ ರೈರ ಪರಮಾಪ್ತನಾಗಿ ಗುರುತಿಸಿಕೊಂಡಿದ್ದ ಗುಣರಂಜನ್, ಜಯಕರ್ನಾಟಕ ಸಂಘಟನೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದಾರೆ. ಇವರ ಹತ್ಯೆಗೆ ಮುತ್ತಪ್ಪ ರೈರ ಅಕ್ಕನ ಮಗ ಮನ್ವಿತ್ ರೈ ಸ್ಕೆಚ್ ಹಾಕಿದ್ದಾನೆ ಎಂಬ ವದಂತಿ ಹಬ್ಬಿತ್ತು. ಗುಣರಂಜನ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಜಯಕರ್ನಾಟಕ ಸಂಘಟನೆಯ ಸದಸ್ಯರು ಕಳೆದ ವಾರ ಗೃಹ ಸಚಿವರಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಮಂಗಳೂರು ಪೊಲೀಸರಿಗೆ ವರ್ಗಾಯಿಸಲಾಗಿತ್ತು.
ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಿಂದ ಹೊರ ಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗುಣರಂಜನ್, ರಿಲೈಬಲ್ ಸೋರ್ಸ್ ಪ್ರಕಾರ ಗೃಹ ಇಲಾಖೆಗೆ ಮನವಿಯನ್ನು ಕೊಟ್ಟಿದ್ದೆ. ಇದರ ಹಿಂದೆ ಇಂಥ ವ್ಯಕ್ತಿ ಎಂದು ಖಚಿತವಾಗಿ ಹೇಳಕ್ಕಾಗುವುದಿಲ್ಲ. ಕರ್ನಾಟಕ ಪೊಲೀಸರ ಬಗ್ಗೆ ನಂಬಿಕೆ ಇದೆ, ಸೀರಿಯಸ್ ಇದ್ದಾರೆ. ರಿಲೈಬಲ್ ಸೋರ್ಸ್ ಎಂದು ಯಾಕೆ ಹೇಳಿದ್ದಂದ್ರೆ ನಿಶ್ಚಿತ ಹೆಸರನ್ನು ಹೇಳಬಾರದು ಅಂತ. ಯಾರು ಶಾಮೀಲು ಇದ್ದಾರೋ ಪೊಲೀಸರು ಅವರನ್ನು ತನಿಖೆ ಮಾಡಬೇಕಾಗುತ್ತದೆ. ಮನ್ವಿತ್ ರೈ ಜತೆ ನನಗೆ ಯಾವುದೇ ವೈಮನಸ್ಸು ಇಲ್ಲ. ಪೊಲೀಸ್ ಭದ್ರತೆ ಬೇಕೆಂದು ನಾನು ಕೇಳಲ್ಲ, ಪೊಲೀಸರೇ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ತನಿಖೆಗೆ ಮಾಹಿತಿ ಬೇಕಿತ್ತು ಎಂದು ಕರೆದಿದ್ದರು, ವಿವರಣೆ ಕೊಟ್ಟಿದ್ದೇನೆ ಎಂದರು.
ಈ ಆರೋಪವನ್ನು ಮನ್ವಿತ್ ರೈ ತಳ್ಳಿ ಹಾಕಿದ್ದಾರೆ. ನಾನು ವಿದೇಶದಲ್ಲಿರುವೆ. ಬಿಜಿನೆಸ್ ವಿಚಾರಕ್ಕೆಂದು ಬಂದಿದ್ದೇನೆ. ನನಗೂ ಇದಕ್ಕೂ ಸಂಬಂಧವಿಲ್ಲ. ನನ್ನ ಮೇಲೆ ಬಂದಿರುವ ಆರೋಪಗಳು ಎಷ್ಟು ಸತ್ಯ ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ಗೊತ್ತಾಗಲಿದೆ. ವಿನಾಕಾರಣ ನನ್ನ ಹೆಸರನ್ನು ಏಕೆ ತರುತ್ತಿದ್ದಾರೆ? ಎನ್ನುವುದು ತಿಳಿಯುತ್ತಿಲ್ಲ. ನನ್ನ ಮೇಲೆ ಯಾವುದೇ ಕ್ರಿಮಿನಲ್ ಕೇಸ್ಗಳು ಇಲ್ಲ, ಎಫ್ಐಆರ್ ಕೂಡ ದಾಖಲಾಗಿಲ್ಲ. ವಿನಾಕಾರಣ ನನ್ನ ಹೆಸರಿಗೆ ಮಸಿ ಬಳೆಯುತ್ತಿದ್ದಾರೆ ಎಂದಿದ್ದರು.