ಪ್ರೇಯಸಿಯನ್ನ ಕೊಂದು ಪ್ರಿಯಕರ ಆತ್ಮಹತ್ಯೆ: ಸಾವಿಗೂ ಮುನ್ನ ಆಕೆ ಬರೆದ ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

love case
Published on

ಆನೇಕಲ್​: ಆಕೆಯ ವಯಸ್ಸಿನ್ನೂ 18 ವರ್ಷ. ಮನೆಯಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಒಬ್ಬಳೇ ಮಗಳೆಂದು ಅಪ್ಪ-ಅಮ್ಮ ಪ್ರೀತಿಯಿಂದ ಸಾಕಿದ್ದರು. ಮಗಳ ಭವಿಷ್ಯಕ್ಕಾಗಿ ಹೆತ್ತವರು ನೂರಾರು ಕನಸು ಕಟ್ಟಿಕೊಂಡಿದ್ದರು... ಬಿ ಫಾರ್ಮಾ ಓದುವೆ ಎಂದ ಮಗಳನ್ನು ಅವಳಿಚ್ಛೆಯಂತೆ ಪಾಲಕರು ಕಾಲೇಜಿಗೂ ಸೇರಿಸಿದ್ದರು. ಆದರೆ, ಕಾಲೇಜಿಗೆ ಹೋಗುವ ಮೊದಲೇ ಮಗಳು ಕೊಲೆಯಾಗಿದ್ದಾಳೆ. ಅವಳ ಶವದ ಪಕ್ಕದಲ್ಲೇ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...

ಇಂತಹ ದುರ್ಘಟನೆ ಆನೇಕಲ್​ ತಾಲೂಕಿನ ಜಿಗಣಿ ಸಮೀಪದ ನಿಸರ್ಗ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದೆ. ಮಾಗಡಿ ಮೂಲದ ದೊಡ್ಡಯ್ಯ ಮತ್ತು ಗಂಗಮ್ಮ ದಂಪತಿ ಏಕೈಕ ಮಗಳು ಸಿಂಚನಾ(18) ಕೊಲೆಯಾದವಳು. ಈಕೆಯನ್ನು ಕೊಂದ ರಾಮನಗರದ ಬಾಣಸವಾಡಿ ಮೂಲದ ಹೇಮಾಪುರ ಕಾಲನಿ ನಿವಾಸಿ ಕಿಶೋರ್​ಕುಮಾರ್​ ಕೂಡ ಸಿಂಚನಾಳ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಪ್ರೇಮಿಸಲು ಒಲ್ಲೆ ಎಂದಿದ್ದಕ್ಕೆ ಸಿಂಚನಾಳನ್ನು ಯುವಕ ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತಾದರೂ, ಸಾವಿಗೂ 2-3 ದಿನದ ಮೊದಲೇ ಸಿಂಚನಾ ಬರೆದಿಟ್ಟಿದ್ದ ಡೆತ್​ ಬೇರೆಯೇ ಹೇಳುತ್ತಿದೆ.

ಫೇಸ್​ಬುಕ್​ನಲ್ಲಿ ಸಿಂಚನಾ ಮತ್ತು ಕಿಶೋರ್​ಕುಮಾರ್​​ಗೆ ಪರಿಚಯ ಆಗಿದೆ. ಇದು ಪ್ರೀತಿಗೆ ತಿರುಗಿದ್ದು, 6 ತಿಂಗಳಿಂದ ಇವರಿಬ್ಬರ ನಡುವೆ ಸಲುಗೆ ಬೆಳೆದಿತ್ತು. 9ನೇ ತರಗತಿ ಓದಿದ್ದ ಕಿಶೋರ್​ನನ್ನು ಸಿಂಚನಾ ತುಂಬಾ ಪ್ರೀತಿಸುತ್ತಿದ್ದಳು. ಇದ್ದಕ್ಕಿದ್ದಂತೆ ಕಿಶೋರ್​, ಬೇರೋಬ್ಬಳ ಜತೆ ಸಲುಗೆ ಬೆಳೆಸಿಕೊಂಡು ಆಕೆಯನ್ನೇ ಪ್ರೀತಿಸಲು ಶುರು ಮಾಡಿಕೊಂಡಿದ್ದ. ಈ ವಿಚಾರ ಗೊತ್ತಾಗಿ ತುಂಬಾ ಮನನೊಂದ ಸಿಂಚನಾ, ಪ್ಲೀಸ್​ ನನಗೆ ಮೋಸ ಮಾಡಬೇಡ. ನಾನು ನಿನ್ನನ್ನು ತುಂಬಾ ಇಷ್ಟಪಡುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದಳಂತೆ. ನ.15ರಿಂದಲೇ ಕಾಲೇಜಿಗೆ ಹೋಗಬೇಕಿದ್ದ ಸಿಂಚನಾ, ಪ್ರೀತಿ ವಿಚಾರಕ್ಕೆ ನೊಂದು ಮನೆಯಲ್ಲೇ ಇದ್ದಳಂತೆ. ಈ ನಡುವೆ ಕಾಲೇಜಿನ ನೋಟ್​ಬುಕ್​ನಲ್ಲಿ 'ನೀನು ನನ್ನನ್ನು ಇಷ್ಟಪಟ್ಟು, ಇದೀಗ ನನಗೆ ಮೋಸ ಮಾಡಿರುವೆ. ನೀನು ಇನ್ನೊಬ್ಬಳನ್ನು ಇಷ್ಟ ಪಡುತ್ತಿದ್ದೀಯಾ.. ನಾನು ಮಾತ್ರ ನಿನ್ನನ್ನು ಸುಮ್ಮನೆ ಬಿಡಲ್ಲ, ನಾನು ಸತ್ತ ಮೇಲೂ ನಿನ್ನನ್ನು ದೆವ್ವ ಆಗಿ ಕಾಡುವೆ' ಎಂದು ಬರೆದಿದ್ದಳು ಎನ್ನಲಾಗಿದೆ. ಈ ವಿಚಾರ ಗೊತ್ತಾಗಿ ನ.18ರಂದು ಸಿಂಚನಾಳ ಪಾಲಕರು ಮನೆಯಲ್ಲಿ ಇಲ್ಲದ ವೇಳೆ ಮನೆಗೆ ಬಂದ ಪ್ರಿಯಕರ, ಗಲಾಟೆ ಮಾಡಿದ್ದಾನೆ.

ಇವರಿಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಪ್ರೇಯಸಿಯ ಕುತ್ತಿಗೆ ಕೊಯ್ದ ಕಿಶೋರ್​ಕುಮಾರ್​, ಆಕೆ ಸಾಯುತ್ತಿದ್ದಂತೆ ಪ್ರೇಯಸಿ ಮನೆಯಲ್ಲೇ ಸೀರೆಯಿಂದ ನೇಣುಬಿಗಿದುಕೊಂಡು ಮೃತಪಟ್ಟಿದ್ದಾನೆ. ಸಿಂಚನಾಳ ತಂದೆ ಮನೆಗೆ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಪ್ರೀತಿಯ ಮಗಳ ಸಾವಿಂದ ಕಂಗೆಟ್ಟ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net