

ಮಂಗಳೂರು/ಪಡುಬಿದಿರೆ: ಅಂತೂ ತೌಕ್ತೆ ಚಂಡಮಾರುತಕ್ಕೆ ಸಿಲುಕಿ ಸಮುದ್ರ ಮಧ್ಯೆ ಸುಮಾರು 40 ಗಂಟೆ ಜೀವ ಕೈಲಿ ಹಿಡಿದು ಕುಳಿತಿದ್ದ ಕೋರಮಂಡಲ್ ಟಗ್‌ನ ಎಲ್ಲಾ 9 ಸಿಬ್ಬಂದಿಯನ್ನೂ ಸುರಕ್ಷಿತವಾಗಿ ಮಂಗಳೂರಿಗೆ ಕರೆತರಲಾಗಿದೆ.
ಶನಿವಾರ ನವಮಂಗಳೂರು ಬಂದರಿನ ಹೊರ ಆಂಕರೇಜ್ ಸಮೀಪ ಸಂಪರ್ಕ ಕಡಿತಗೊಂಡು ಚಂಡ ಮಾರುತದ ಹೊಡೆತಕ್ಕೊಳಗಾಗಿ ಕಾಪು ಲೈಟ್ ಹೌಸ್ ಸಮೀಪದ 15 ಕಿ.ಮೀ. ದೂರದಲ್ಲಿರುವ ಸಮುದ್ರ ಬಂಡೆ ಮಧ್ಯೆ ಈ ಟಗ್ ಸಿಲುಕಿಕೊಂಡಿತು. ಭಾನುವಾರ ಇಡೀ ದಿನ ಈ ಸಿಬ್ಬಂದಿಗಳ ರಕ್ಷಣೆಗೆ ಪ್ರಯತ್ನ ನಡೆಸಲಾಗಿದ್ದರೂ ಹವಾಮಾನ ವೈಪರೀತ್ಯ, ಕಡಲಿನ ಅಬ್ಬರದಿಂದ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಭಾನುವಾರ ಸಂಜೆ ರಕ್ಷಣಾ ಕಾರ್ಯ ಸ್ಥಗಿತಗೊಂಡಿತ್ತು. ಈ ನಡುವೆ ಟಗ್‌ನ ಸಿಬ್ಬಂದಿಗಳು ಸೆಲ್ಫಿ ವಿಡಿಯೋ ಮಾಡಿ ತಾವು ಬಹಳ ಕಷ್ಟದಲ್ಲಿದ್ದು ಆದಷ್ಟು ಬೇಗ ರಕ್ಷಿಸುವಂತೆ ಮೊರೆಯಿಟ್ಟಿದ್ದರು.
ಸೋಮವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳ ತಂಡ ಹೆಲಿಕಾಪ್ಟರ್ ಹಾಗೂ ಕೋಸ್ಟ್ ಗಾರ್ಡ್ ನೌಕೆ ಮೂಲಕ ರಕ್ಷಣಾ ಕಾರ್ಯ ನಡೆಯಿತು. ಕೊಚ್ಚಿನ್ನಿಂದ ಸೋಮವಾರ ಬೆಳಗ್ಗೆ ಆಗಮಿಸಿದ ರಕ್ಷಣಾ ಇಲಾಖೆಯ ಹೆಲಿಕಾಪ್ಟರ್ ಬಂದಿತ್ತು. ಟಗ್ ಸಿಬ್ಬಂದಿಗಳನ್ನು ಹೆಲಿಕಾಪ್ಟರ್ ಮೂಲಕ ಮೇಲೆತ್ತಿ ಕೋಸ್ಟ್‌ಗಾರ್ಡ್ ನೌಕೆಗೆ ಇಳಿಸಲಾಗಿದ್ದು, ಅವರನ್ನು ಮಂಗಳೂರಿಗೆ ಕರೆ ತರಲಾಯಿತು.
ಕಾರ್ಯಾಚರಣೆಯನ್ನ ವೀಕ್ಷಿಸಲು ಜನ ತಂಡೋಪತಂಡವಾಗಿ ಆಗಮಿಸಿದ್ದು, ಪೊಲೀಸರು ಅವರನ್ನು ಚದುರಿಸಿದರು. ಶಾಸಕ ಲಾಲಾಜಿ ಆರ್ ಮೆಂಡನ್, ಪುರಸಭಾ ಅಧ್ಯಕ್ಷ ಅನಿಲ್ ಕಾಪು, ವೃತ್ತ ನಿರೀಕ್ಷಕ ಪ್ರಕಾಶ್, ಕಾಪು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ವಿವೇಕಾನಂದ ಗಾಂವ್ಕರ್, ಕರಾವಳಿ ಕಾವಲು ಪಡೆ ಹೆಜಮಾಡಿ ಠಾಣಾಧಿಕಾರಿ ಸುಜಾತಾ ಇದ್ದರು.