

ಕಡೂರು: ಮದ್ಯವರ್ಜನ ಶಿಬಿರಗಳು ಮದ್ಯವ್ಯಸನಿಗಳಿಗೆ ಕತ್ತಲಿನಿಂದ ಬೆಳಕಿನಡೆಗೆ ಸಾಗುವ ಹೊಸತನದ ಜೀವನಕ್ಕೆ ಸಾಕ್ಷಿಯಾಗಿದೆ ಎಂದು ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಹೇಳಿದರು.
ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹಾಗೂ ಜನಜಾಗೃತಿ ವೇದಿಕೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ 1980ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ರಾಜ್ಯಾದ್ಯಂತ ಲಕ್ಷಾಂತರ ಕುಟುಂಬಗಳು ವ್ಯಸನ ಮುಕ್ತರನ್ನಾಗಿಸಿದ್ದಾರೆ. ಕಳೆದ ಒಂದು ವಾರದ ಶಿಬಿರದ ಮಹತ್ವ ಪಡೆದು ಹೊಸ ಬದುಕಿಗೆ ಶಿಬಿರಾರ್ಥಿಗಳು ಕಾಲಿಟ್ಟಿದ್ದಾರೆ ಎಂದರು.
ಧಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಕೇವಲ ಆರ್ಥಿಕ ವ್ಯವಸ್ಥೆಗೆ ಒತ್ತು ಕೊಡದೆ ಸಮಾಜಮುಖಿಯಾಗಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿ ಅನೇಕ ಬಡಕುಟುಂಬಗಳ ಸ್ವಾವಲಂಬನೆ ಬದುಕಿಗೆ ಆಸರೆಯಾಗಿದೆ. ಮದ್ಯಪಾನ ತ್ಯಜಿಸಿ ನವಜೀವನಕ್ಕೆ ಕಾಲಿಡುತ್ತಿರುವವರು ಸಮಾಜದಲ್ಲಿ ಎಲ್ಲ ಗೌರವಗಳನ್ನು ಪಡೆದುಕೊಳ್ಳುತ್ತಾರೆ. ಸಮಾಜದ ಸತ್ಪ್ರಜೆಗಳಾಗಿ ಕುಟುಂಬದ ಆಧಾರ ಸ್ತಂಬಗಳಾಗಬೇಕು. ತಮ್ಮಲ್ಲಿನ ತಪ್ಪು ಹೆಜ್ಜೆಗಳನ್ನು ತಿದ್ದಿಕೊಂಡು ಉತ್ತಮ ಜೀವನ ನಡೆಸುವಂತಾಗಬೇಕು ಎಂದರು.
ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ, ವ್ಯಕ್ತಿಯು ಪರಿಪೂರ್ಣವಾಗಲು ಸದ್ಗುಣಗಳನ್ನು ಸಂಪಾದನೆ ಮಾಡಿಕೊಳ್ಳಬೇಕು. ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಸಾತ್ವಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಆರೋಗ್ಯಕರ ಸಮಾಜ ಸೃಷ್ಟಿಸಲು ಸಜ್ಜನರ ಸಹವಾಸ ಬೆಳೆಸಿಕೊಳ್ಳಬೇಕು ಎಂದರು.