ಯುವ ನಟನ ಬರ್ಬರ ಹತ್ಯೆ: ಕೆಲ ತಿಂಗಳ ಹಿಂದೆಯೇ ಪತ್ನಿ ಸಾವು, ಪುಟ್ಟ ಕಂದನೀಗ ತಬ್ಬಲಿ... ಮನಕಲಕುತ್ತೆ ಈ ಸ್ಟೋರಿ

New Project(6)
Published on

ಬೆಂಗಳೂರು: ಚಿತ್ರರಂಗದಲ್ಲಿ ಹೆಸರು ಮಾಡಬೇಕೆಂದು ಕನಸು ಕಂಡಿದ್ದ ಮಂಡ್ಯ ಮೂಲದ ಯುವನಟ ಸತೀಶ್​ ವಜ್ರ ಅವರನ್ನು ಶುಕ್ರವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವತಿಯೊಬ್ಬಳನ್ನು ಪ್ರೀತಿಸಿ ಮದ್ವೆ ಆಗಿದ್ದ ಸತೀಶ್​ಗೆ ಒಂದು ಮಗು ಕೂಡ ಇದೆ. ಆದರೆ, ಕೆಲ ತಿಂಗಳ ಹಿಂದೆ ಪತ್ನಿ ಮೃತಪಟ್ಟಿದ್ದರು. ಇದೀಗ ಸತೀಶ್​ರನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದು, ಅಪ್ಪ-ಅಮ್ಮನನ್ನು ಕಳೆದುಕೊಂಡ ಪುಟ್ಟ ಕಂದ ತಬ್ಬಲಿಯಾಗಿದೆ.

ಪಾಂಡವಪುರ ತಾಲೂಕಿನ ಹಳೇಬೀಡು ಮೂಲದ ಸತೀಶ್, ಮೂರು ವರ್ಷಗಳಿಂದ ಆರ್.ಆರ್.ನಗರದ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು. ಪತ್ನಿ ಸಾವಿನ ಬಳಿಕ ಮಗುವನ್ನ ಮಾವನ ಮನೆಯಲ್ಲಿ ಬಿಟ್ಟಿದ್ದರು. ಸತೀಶ್ ಒಬ್ಬರೇ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ ತಡವಾಗಿ ಬಂದಿದ್ದ ಸತೀಶ್​ ಬೆಳಗಾಗುವಷ್ಟರಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಮಲಗಿದ್ದರು. ಈ ಘಟನೆ ಕುರಿತು ಮನೆ ಮಾಲೀಕ ಹೇಮಂತ್ ಕುಮಾರ್ ಪೊಲೀಸರಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.

'ನನಗೆ ಶನಿವಾರ ಬೆಳಗ್ಗೆ 8.30ಗಂಟೆ ಸುಮಾರಿಗೆ ವಿಚಾರ ಗೊತ್ತಾಯ್ತು. ಮನೆ ಮುಂಭಾಗದ ಆವರಣ ಕ್ಲೀನ್ ಮಾಡಲು ಮನೆಯವರು ಹೋದಾಗ ಡೋರ್ ಹತ್ರ ಬ್ಲಡ್ ಇರೋದ್ ನೋಡಿ ಭಯದಿಂದ ನಂಗೆ ಕಾಲ್ ಮಾಡಿದ್ರು. ನಾನು ಬಂದು ಡೋರ್ ಓಪನ್ ಮಾಡೋಕ್ ನೋಡ್ದೆ. ಒಳಗಡೆ ತುಂಬಾ ರಕ್ತ ಬಿದ್ದಿತ್ತು. ಆಮೇಲೆ ನಾನು ಭಯ ಬಿದ್ದು ಪೊಲೀಸರಿಗೆ ಕಾಲ್ ಮಾಡ್ದೆ. ಸತೀಶ್ ಎಲ್ರೂ ಜೊತೆ ಚೆನ್ನಾಗ್ ಇದ್ರು. ರಾತ್ರಿ ಸ್ವಲ್ಪ ತಡವಾಗಿ ಬರ್ತಿದ್ರು. ಸಿನಿಮಾ ಕೆಲ್ಸ ಅದು ಇದು ಅಂತಾ ತಡವಾಗಿ ಬರ್ತಿದ್ರು. ನಿನ್ನೆ ರಾತ್ರಿ 10.30ರ ಸುಮಾರಿಗೆ ಬಂದ್ರು. ಎಂಟು ತಿಂಗಳ ಹಿಂದೆ ಅವರ ಪತ್ನಿ ಸಾವನ್ನಪ್ಪಿದ್ರು. ಹರ್ಟ್ ಪ್ರಾಬ್ಲಮ್ ಅಂತಾ ಸತ್ತಿದ್ರು. ಇಬ್ರಿಗೂ ಒಂದ್ ಮಗು ಇದೆ. ಮಗು ಯಾರ ಬಳಿ ಇಟ್ಕೊಳೋದು? ಅಂತ ಆಗಾಗ ಮಾತು-ಕತೆ ಆಗ್ತಿತ್ತು. ಮಗು ಸದ್ಯ ಸತೀಶ್​ರ ಪತ್ನಿಯ ತವರು ಮನೇಲಿದೆ. ಯಾರೋ ಪರಿಚಯ ಇರೋರೆ ಬಂದು ಕೊಲೆ ಮಾಡಿದ್ದಾರೆ. ಡೋರ್ ಹೊಡೆಯೋದು ಏನೂ ಮಾಡಿಲ್ಲ. ನಂಬಿಸಿ ಈ ತರ ಮಾಡಿ ಹೋಗಿದ್ದಾರೆ... ಎಂದು ಮನೆ ಮಾಲೀಕ ಹೇಮಂತ್​ ಹೇಳಿದ್ದಾರೆ.

ಇನ್ನು ಆ ಮನೆಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಶುಕ್ರವಾರ ರಾತ್ರಿ 12:30ರ ಸುಮಾರಿಗೆ ಇಬ್ಬರು ಅಪರಿಚಿತರು ಒಳ ಹೋಗಿರೋದು ಪತ್ತೆಯಾಗಿದೆ. ಕೆಲ ಸಮಯದ ಬಳಿ ಸತೀಶ್​ರ​ ಬೈಕ್​ ಅನ್ನು ಅವರೇ ತೆಗೆದುಕೊಂಡು ಹೋಗಿದ್ದಾರೆ. ಆರ್.ಆರ್ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net