ಸ್ಯಾಂಡಲ್​ವುಡ್​ ಬೆಡಗಿಗಾಗಿ ಅಣ್ಣನ ಭೀಕರ ಹತ್ಯೆ! ಸಾವಿರ ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ

actor shanaya
Published on

ಹುಬ್ಬಳ್ಳಿ: ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಏ.11ರಂದು ರುಂಡ-ಮುಂಡ-ಕೈಕಾಲು ಬೇರ್ಪಟ್ಟು ಅರ್ಧಂಬರ್ಧ ಸುಟ್ಟಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರಾಕೇಶ ಕಾಟವೆ ಮೃತದೇಹ ಕೇಸ್​ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಬರೋಬ್ಬರಿ ಸಾವಿರ ಪುಟಗಳ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಸಿನಿಮಾ ನಟಿ, ಮಾಡೆಲ್ ಸೋನಿಯಾ ಅಲಿಯಾಸ್ ಶನಾಯ ಕಾಟವೆ ಸಹೋದರ ರಾಕೇಶ ಕಾಟವೆ ಅವರ ಕೊಲೆ 2021ರ ಏಪ್ರಿಲ್ 9 ರಂದು ನಡೆದಿತ್ತು. ರಾಕೇಶ್​ನನ್ನು ಶನಾಯಳ ಪ್ರಿಯಕರ ನಿಯಾಜ್ ಬರ್ಬರವಾಗಿ ಕೊಲೆ ಮಾಡಿದ್ದ. ಈ ಹತ್ಯೆಗೆ ಆಸ್ತಿಯೂ ಒಂದು ಪ್ರಮುಖ ಕಾರಣ. ಶನಾಯ ಹೆಸರಲ್ಲಿದ್ದ ಕೋಟ್ಯಂತರ ರೂ. ಬೆಲೆ ಬಾಳುವ ಆಸ್ತಿಗಾಗಿ ನಿಯಾಜ್ ಪ್ರೀತಿಯ ಸೋಗು ಹಾಕಿದ್ದ. ಇದಕ್ಕೆ ಅಡ್ಡಿಯಾಗಿದ್ದ ರಾಕೇಶನನ್ನು ಕೊಲೆ ಮಾಡಿದ್ದ.

ಪ್ರಮುಖ ಆರೋಪಿ ನಿಯಾಜ್ ಕಾಟೀಗಾರ ಹಾಗೂ ಆತನ ಸಹಚರರು ಹೇಗೆ ಭೀಕರವಾಗಿ ಹತ್ಯೆಗೈದರು. ನಂತರ ಸಾಕ್ಷಿ ನಾಶ ಮಾಡಲು, ಪೊಲೀಸರ ಕಣ್ತಪ್ಪಿಸಲು ಹೇಗೆ ತಂತ್ರ ಹೂಡಿದ್ದರು. ಕಾರಲ್ಲಿ ಶವ ಇಟ್ಟುಕೊಂಡು ವಿವಿಧೆಡೆ ಓಡಾಡಿದ್ದು, ಶನಾಯ ತಾಯಿ ಹೆಸರಲ್ಲಿರುವ ಕೇಶ್ವಾಪುರದ ಸೈಟಲ್ಲೇ ರಾಕೇಶ ಶವ ಹೂತು ಹಾಕಲು ರೂಪಿಸಿದ್ದ ಸಂಚು... ಎಂಬಿತ್ಯಾದಿ ಅಂಶಗಳು ಚಾರ್ಜ್​ಶೀಟ್​ನಲ್ಲಿ ದಾಖಲಾಗಿವೆ. ಗ್ರಾಮೀಣ ಠಾಣೆ ಇನ್​ಸ್ಪೆಕ್ಟರ್, ಪ್ರಕರಣದ ತನಿಖಾಧಿಕಾರಿ (ಐಒ) ರಮೇಶ ಗೋಕಾಕ ನೇತೃತ್ವದ ತಂಡ 2ನೇ ಜೆಎಂಎಫ್​ಸಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದೆ.

ಶನಾಯಳ ತಾಯಿ ಅವರು ರಾಕೇಶ್​ ಕಾಟವೆಯನ್ನು ದತ್ತು ಪಡೆದಿದ್ದಳು ಎನ್ನಲಾಗಿದೆ. ರಾಕೇಶ್​ ಕಾಟವೆ ಮೂಲ ಪಾಲಕರು ಯಾರು ಎಂಬುದೇ ಇಲ್ಲಿ ದೊಡ್ಡ ಪ್ರಶ್ನೆಯಾಗಿ ಕಾಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಕೇಶ್​ನ ಡಿಎನ್​ಎ ಪರೀಕ್ಷೆಗಾಗಿ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರು ಮತ್ತು ಬೆಳಗಾವಿಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮಾದರಿ ಸಂಗ್ರಹಿಸಿ ಕಳುಹಿಸಿದ್ದರು. ಈ ವರದಿ ಇನ್ನೂ ಪೊಲೀಸರ ಕೈ ಸೇರಿಲ್ಲ. ವರದಿ ಬಂದ ಬಳಿಕ ಚಾರ್ಜ್​ಶೀಟ್​ಗೆ ಹೆಚ್ಚವರಿ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟಿ ಶನಾಯ ಕಾಟವೆಗೆ ಜಾಮೀನು: ಪ್ರಕರಣದ ಎಂಟನೇ ಆರೋಪಿ, ನಟಿ ಶನಾಯ ಕಾಟವೆಗೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ. ಆರನೇ ಆರೋಪಿ ನಿಯಾಜ್ ಸಹೋದರ ಫಿರೋಜ್ ಸೈಫುದ್ದೀನ್ ಕಾಟೀಗಾರ ಹಾಗೂ ಏಳನೇ ಆರೋಪಿ ನಿಯಾಜ್ ತಂದೆ ಸೈಫುದ್ದೀನ್ ಕಾಟೀಗಾರನಿಗೆ ಈ ಮೊದಲೇ ಜಾಮೀನು ದೊರೆತಿತ್ತು.

ಶನಾಯ ಕಾಟವೆ ಪ್ರಿಯಕರ ನಿಯಾಜ್ ಕಾಟೀಗಾರ ಹಾಗೂ ಸಹಚರರು ಏಪ್ರಿಲ್ 9ರಂದು ಆಕೆಯ ಸಹೋದರ ರಾಕೇಶ್​ ಕಾಟವೆಯನ್ನು ಹತ್ಯೆಗೈದಿದ್ದರು. ಆತನ ರುಂಡವನ್ನು ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಾಗೂ ಮುಂಡವನ್ನು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಏಪ್ರಿಲ್ 12ರಂದು ಪೊಲೀಸರಿಗೆ ರುಂಡ- ಮುಂಡ ಪತ್ತೆಯಾಗಿತ್ತು. ಕೇಶ್ವಾಪುರ ಹಾಗೂ ಗ್ರಾಮೀಣ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ತನಿಖೆ ಆರಂಭಿಸಿದ್ದ ಎರಡೂ ತಂಡಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದವು. ಏಪ್ರಿಲ್ 18ರಂದು ಗ್ರಾಮೀಣ ಠಾಣೆ ಪೊಲೀಸರು ಪ್ರಮುಖ ಆರೋಪಿ ಬೆಂಗೇರಿಯ ನಿಯಾಜ್ ಸೈಫುದ್ದೀನ್ ಕಾಟೀಗಾರ, ತೌಸೀಫ್ ಚನ್ನಾಪುರ, ಅಲ್ತಾಫ ಮುಲ್ಲಾ ಹಾಗೂ ಅಮನ್ ಗಿರಣಿವಾಲೆ ಎಂಬುವರನ್ನು ಬಂಧಿಸಿದ್ದರು. ಬಳಿಕ ಮಲೀಕಜಾನ್, ಫಿರೋಜ್ ಕಾಟೀಗಾರ, ಸೈಫುದ್ದೀನ್ ಕಾಟೀಗಾರ ಹಾಗೂ ಶನಾಯ ಕಾಟವೆಯನ್ನು ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net