

ಬೆಂಗಳೂರು: ದರ್ಶನ್ ಹೆಸರಲ್ಲಿ ವಂಚನೆ ಮಾಡಲೆತ್ನಿಸಿದ್ದ ಅರುಣಾಕುಮಾರಿ ಕೇಸ್ಗೆ ಸ್ವತಃ ನಟ ದರ್ಶನ್ ಅವರೇ ತಾರ್ಕಿಕ ಅಂತ್ಯ ಹಾಡಿದ್ದರೂ ಸಿನಿಮಾ ನಿರ್ದೇಶಕ, ಹಿರಿಯ ಪತ್ರಕರ್ತ ಇಂದ್ರಜಿತ್ ಲಂಕೇಶ್ ಈ ಪ್ರಕರಣಕ್ಕೆ ಎಂಟ್ರಿ ಕೊಡುವ ಮೂಲಕ ಭಾರೀ ಸದ್ದು ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ನಡೆದಿರೋ ಗಲಾಟೆ, ಲೋನ್ ಹಗರಣ, ಮೈಸೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದಿರುವ ದಲಿತನ ಮೇಲಿನ ಹಲ್ಲೆ ಬಗ್ಗೆ ದರ್ಶನ್ ವಿರುದ್ಧ ಸುದ್ದಿಗಾರರ ಮುಂದೆ ಹೊಸ ಬಾಂಬ್ ಸಿಡಿಸಿರುವ ಇಂದ್ರಜಿತ್ ಲಂಕೇಶ್, ಎಲ್ಲದರ ಬಗ್ಗೆಯೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರದ ಮೂಲಕ ತಿಳಿಸಿದ್ದೇನೆ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನೂ ಹೇಳಿಲ್ಲ. ಯಾವುದೇ ಸಾಕ್ಷಿಗಳನ್ನು ಅವ್ರು ನಮಗೆ ನೀಡಿಲ್ಲ ಎಂದಿದ್ದಾರೆ.
ಇಂದ್ರಜಿತ್ ಲಂಕೇಶ್ ನನಗೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದ ಆಧಾರದ ಮೇಲೆ ತನಿಖೆ ಮಾಡುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನು ಹೇಳಿಲ್ಲ. ಯಾವುದೇ ಸಾಕ್ಷಿಗಳನ್ನು ಅವ್ರು ನಮಗೆ ನೀಡಿಲ್ಲ. ಇಂದ್ರಜಿತ್ ಏನಾದ್ರು ಆರೋಪ ಮಾಡೋದಾದ್ರೆ ದೂರು ಕೊಟ್ಟು ಆರೋಪಗಳನ್ನ ಮಾಡಲಿ. ನನಗೆ ಕೊಟ್ಟ ಮನವಿ ಮೇಲೆ ತನಿಖೆ ನಡೆಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಬೊಮ್ಮಾಯಿ ಹೇಳಿದರು.
ಗೃಹ ಸಚಿವರಿಗೆ ಕೊಟ್ಟ ಮನವಿ ಪತ್ರದಲ್ಲಿ ಯಾರೊಬ್ಬರ ಹೆಸರನ್ನೂ ನಮೂದಿಸದ ಇಂದ್ರಜಿತ್, ಸುದ್ದಿಗಾರರ ಬಳಿ ನೇರವಾಗಿಯೇ ದರ್ಶನ್ ಹೆಸರು ಪ್ರಸ್ತಾಪಿಸಿ ಆರೋಪಿಸಿದರು. ಮೈಸೂರು ಪೊಲೀಸ್ ಸ್ಟೇಷನ್ಗಳು ಸೆಟಲ್ಮೆಂಟ್ ಸ್ಟೇಷನ್ಗಳಾಗಿವೆ. ಏನ್ರಿ ಅದು ತಲೆ ಸೀಳ್ತೀನಿ ಅನ್ನೋದು? ಆ ರೀತಿ ಸ್ಟಾರ್ ಮಾತನಾಡಬೇಕಿತ್ತಾ? ಎಂದರು.
ದರ್ಶನ್-ಉಮಾಪತಿ ನಡುವಿನ ಕೇಸ್ ಸುಖಾಂತ್ಯದ ಬಗ್ಗೆ ಕೆಂಡಾಮಂಡಲವಾದ ಇಂದ್ರಜಿತ್, ಜನರು ಪೆದ್ದರಲ್ಲ. ಹಲವು ನಟರ ವಿಮರ್ಶೆ ಬರೆದಿದ್ದೇನೆ. ನಾನು ಯಾರಿಗೂ ಭಯ ಪಡಲ್ಲ. ಅರುಣಾಕುಮಾರಿಗೂ, ನನಗೂ ಪರಿಚಯವಿಲ್ಲ. ತನಿಖೆ ಪ್ರಗತಿಯಲ್ಲಿರುವಾಗ್ಲೇ ಕಾಂಪ್ರಮೈಸ್ ಆಗ್ತಾರೆ ಅಂದ್ರೆ ಯೋಚನೆ ಮಾಡಿ ಎಂದರು.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ನಲ್ಲಿ ದಲಿತ ಸಪ್ಲೈಯರ್ಗೆ ನಟ ದರ್ಶನ್ ಮತ್ತು ಸ್ನೇಹಿತರ ಗ್ಯಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಪೊಲೀಸ್ ಸ್ಟೇಷನ್ನಲ್ಲಿ ಸೆಟಲ್ಮೆಂಟ್ ಮಾಡಿದ್ದಾರೆ. ಜನ ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ. ಕಾರಿನಲ್ಲಿ ಕೂತು ಅರುಣಾ ಕುಮಾರಿಗೆ ಹಿಂಸೆ ಮಾಡಿದ್ದಾರೆ. ಮೈಸೂರು ಪೊಲೀಸರೇನು ಬಳೆ ತೊಟ್ಟಿದ್ದಾರಾ? ಪೊಲೀಸರ ನಡವಳಿಕೆ ದುರಂತ ಅನ್ನಿಸುತ್ತೆ ಎಂದು ಇಂದ್ರಜಿತ್ ಗಂಭೀರ ಆರೋಪ ಮಾಡಿದರು.