

ಬೆಂಗಳೂರು: ಗೋರಿಪಾಳ್ಯದಲ್ಲಿ ಇಂದು(ಶುಕ್ರವಾರ) ಬೆಳಗ್ಗೆ ವಿಚ್ಛೇದಿತ ಮಹಿಳೆ ಮೇಲೆ ಸಹೋದ್ಯೋಗಿಯಿಂದಲೇ ಆ್ಯಸಿಡ್ ದಾಳಿ ಆಗಿದೆ. ಸಂತ್ರಸ್ತೆ ಮತ್ತು ಆರೋಪಿ ಇಬ್ಬರಿಗೂ ಈ ಹಿಂದೆ ಬೇರೆ ಬೇರೆ ಮದ್ವೆ ಆಗಿದ್ದು, ಆ ಎರಡೂ ದಾಂಪತ್ಯ ವಿಚ್ಛೇದನ ಪಡೆಯುವ ಮೂಲಕ ಮುರಿದು ಬಿದ್ದಿದೆ. ಸಂತ್ರಸ್ತೆ ಮೂರು ಮಕ್ಕಳ ತಾಯಿ ಕೂಡ ಹೌದು. ಇವರಿಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಗೆಳೆತನ ಆಪ್ತತೆಗೆ ತಿರುಗಿತ್ತು. ಇದೇ ಮಹಿಳೆಯ ಪಾಲಿಗೆ ಮುಳುವಾಗಿದ್ದು ಮಾತ್ರ ದುರಂತ.
ಇಲಿಯಾಸನಗರದ 31 ವರ್ಷದ ಮಹಿಳೆ ಆ್ಯಸಿಡ್ ದಾಳಿಗೆ ತುತ್ತಾಗಿದ್ದು, ಸಂಜಯನಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಾಣಾಪಾಯದಿಂದ ಸಂತ್ರಸ್ತೆ ಪಾರಾಗಿದ್ದಾಳೆ. ಸಂತ್ರಸ್ತೆಯ ಸ್ನೇಹಿತ ಮಹಮ್ಮದ್ ವುಲ್ಲಾ ಎಂಬಾತನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತೆಗೆ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ಪತಿಯಿಂದ ವಿವಾಹ ವಿಚ್ಛೇದನ ಪಡೆದು ಇಲಿಯಾಸನಗರದಲ್ಲಿ ಮಕ್ಕಳ ಜತೆ ನೆಲೆಸಿದ್ದಳು. ಕುಮಾರಸ್ವಾಮಿ ಲೇಔಟ್ ಹತ್ತಿರದ ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಗೋರಿಪಾಳ್ಯದ ಮಹಮ್ಮದ್ ಸಹ ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟು ಅದೇ ಅಗರತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ.
ಎರಡು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಇಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು. ಇತ್ತೀಚಿಗೆ ಗೆಳತಿ ಬಳಿ ಮಹಮ್ಮದ್ ಮದುವೆ ಪ್ರಸ್ತಾಪ ಮಾಡಿದ್ದ. ಅದಕ್ಕೆ "ನೀನು ಸಹ ವಿಚ್ಛೇದನ ಪಡೆದಿರುವನು. ನನಗೆ ಮೂವರು ಮಕ್ಕಳಿದ್ದಾರೆ. ನಿನ್ನೊಂದಿಗೆ ಮದುವೆ ಸಾಧ್ಯವಿಲ್ಲ'' ಎಂದು ಆಕೆ ತಿರಸ್ಕರಿಸಿದ್ದಳು. ಆದರೂ ಮದುವೆ ಆಗುವಂತೆ ಆತ ಪೀಡಿಸುತ್ತಲೇ ಇದ್ದ. ಇಂದು ಬೆಳಗ್ಗೆ 9.30ಕ್ಕೆ ಇಲಿಯಾಸ್ ನಗರಕ್ಕೆ ಬಂದಿದ್ದ ಆತ, ಮನೆಯಿಂದ ಕೆಲಸಕ್ಕೆ ಹೋಗುತ್ತಿದ್ದ ಗೆಳತಿಯನ್ನು ಅಡ್ಡ ಹಾಕಿ ಮತ್ತೆ ಮದುವೆ ಬಗ್ಗೆ ಪ್ರಸ್ತಾಪಿಸಿದ್ದ. ಆಗಲೂ ಆಕೆ ನಿರಾಕರಿಸಿದ್ದಳು. ಇಬ್ಬರು ಮಾತನಾಡುತ್ತಲೇ ಸಾರಕ್ಕಿ ಮೆಟ್ರೋ ನಿಲ್ದಾಣ ಬಳಿಗೆ ಬಂದಿದ್ದಾರೆ.
ಎಷ್ಟೇ ಗೊಗರೆದು ಕೇಳಿದರೂ ಆಕೆ ಮದುವೆಗೆ ಒಪ್ಪಿಲ್ಲ. ಪೂರ್ವ ನಿಯೋಜಿತವಾಗಿ ಶೌಚಗೃಹ ಸ್ವಚ್ಛಗೊಳಿಸುವ ಡೆಲ್ಯೂಟೆಡ್ ಆ್ಯಸಿಡ್ ತಂದಿದ್ದ ಆತ, ಗೆಳತಿ ಮೇಲೆ ಎರಚಿ ಓಡಿಹೋಗಿದ್ದ. ನೋವಿನಿಂದ ನರಳುತ್ತಾ ಚೀರಾಡುತ್ತಿದ್ದ ಮಹಿಳೆಯನ್ನು ಸಾರ್ವಜನಿಕರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಕಣ್ಣು, ಭುಜ ಮತ್ತು. ಕುತ್ತಿಗೆ ಭಾಗಕ್ಕೆ ಸುಟ್ಟ ಗಾಯವಾಗಿದ್ದು, ಪ್ರಾಣಪಾಯದಿಂದ ಸಂತ್ರಸ್ತೆ ಪರಾಗಿದ್ದಾಳೆ.
ಒಂದು ತಿಂಗಳ ಹಿಂದೆಯೂ ಯುವತಿಯೊಬ್ಬಳ ಮೇಲೆ ಸುಂಕದಕಟ್ಟೆಯಲ್ಲಿ ಭಗ್ನಪ್ರೇಮಿ ನಾಗೇಶ್ ಎಂಬಾತ ಆ್ಯಸಿಡ್ ದಾಳಿ ಮಾಡಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯ ನರಳಾಡ ನೋಡಿದರೆ ಎಂಥವರಿಗೂ ಕರುಳು ಹಿಂಡುವಂತಿತ್ತು. ಸ್ವಾಮೀಜಿ ವೇಷದಲ್ಲಿದ್ದ ಆರೋಪಿ ನಾಗೇಶ್ನಲ್ಲಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಪ್ರಕರಣ ಈಗಲೂ ಬೆಚ್ಚಿಬೀಳಿಸುವಂತಿದೆ. ಇದೀಗ ವಿಚ್ಛೇದಿತ ಮಹಿಳೆ ಮೇಲೆ ಆ್ಯಸಿಡ್ ಎರಚಿರುವುದು ಸಹಜವಾಗಿ ಆತಂಕ ಮೂಡಿಸಿದೆ.