

ಚಿತ್ರದುರ್ಗ: ತನ್ನ ಪ್ರೀತಿಗೆ ಸಮ್ಮತಿಸಲಿಲ್ಲ ಎಂದು ಆಕ್ರೋಶಗೊಂಡ ಯುವಕ ತನ್ನ ಚಿಕ್ಕಪ್ಪನನ್ನೇ ಕೊಲೆಗೈದು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಚಿತ್ರಲಿಂಗ (21) ಬಂಧಿತ ಆರೋಪಿ. ಘಟನೆ ನಡೆದು 24 ಗಂಟೆಯೊಳಗೆ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊಳಲ್ಕೆರೆ ತಾಲೂಕು ಚಿತ್ರಹಳ್ಳಿ ಗೊಲ್ಲರಹಟ್ಟಿ ನಿವಾಸಿ ಈಶ್ವರಪ್ಪ(65) ಕೊಲೆಯಾದ ದುರ್ದೈವಿಯಾಗಿದ್ದು, ಮೃತ ಈಶ್ವರಪ್ಪನ ಮೊಮ್ಮಗಳನ್ನು ಪ್ರೀತಿಸುತ್ತಿದ್ದ ಚಿತ್ರಲಿಂಗನ ಪ್ರೀತಿಗೆ ಅಡ್ಡಿಯಾಗಿದ್ದರಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಶನಿವಾರ ಅರಸನಘಟ್ಟದ ಕಣಿವೆ ಬಳಿ ಈಶ್ವರಪ್ಪ ಅವರನ್ನು ತಲೆಗೆ ದೊಣ್ಣೆಯಿಂದ ಹೊಡೆದು,ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದನು. ಈ ಕುರಿತು ಪ್ರಕರಣ ದಾಖಲಿಸಿ ಆರೋಪಿ ಬೆನ್ನಟ್ಟಿದ್ದ ಚಿಕ್ಕಜಾಜೂಜು ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಹಣಕಾಸಿನ ವೈಮನಸ್ಯ ಹಾಗೂ ಅವರ ಮೊಮ್ಮಗಳನ್ನು ನಾನು ಪ್ರೀತಿಸುತ್ತಿದ್ದೆ,ಆದರೆ ಈಶ್ವರಪ್ಪ ಒಪ್ಪಿರಲಿಲ್ಲ, ಅದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಕೆ.ಪರಶುರಾಮ್ ತಿಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)