ಶಾಸಕ ಜಮೀರ್ ಅಹ್ಮದ್​ರ​ ಮನೆ ಮುಂದೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

New Project(26)
Published on

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್ ಖಾನ್​​ ಅವರ ಮನೆ ಮುಂದೆ ಮಂಗಳವಾರ ಮಧ್ಯಾಹ್ನ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು. ಎಚ್ಚೆತ್ತ ಪೊಲೀಸರು ಅನಾಹುತ ತಪ್ಪಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಜಮೀರ್​ರ ಮನೆ ಸೇರಿ 5 ಕಡೆ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದೆ. 40ಕ್ಕೂ ಹೆಚ್ಚು ಅಧಿಕಾರಿಗಳ ತಂಡ, ಜಮೀರ್​ರ ಕಂಟೋನ್ಮೆಂಟ್ ಐಷಾರಾಮಿ ‌ಮನೆ, ಒಕ್ ಅಪಾರ್ಟ್​ಮೆಂಟ್​ನ ಪ್ಲ್ಯಾಟ್, ಸದಾಶಿವನಗರದ ಗೆಸ್ಟ್ ಹೌಸ್, ಬನಶಂಕರಿಯ ಜಿ.ಕೆ. ಅಸೋಸಿಯೇಷನ್ ಕಚೇರಿ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ ಕಚೇರಿಯುಲ್ಲಿ ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಿದೆ.

ಜಮೀರ್​ರ ಮನೆ ಒಳಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರೆ, ಅತ್ತ ಹೊರಗೆ ಜಮಾಯಿಸಿದ ನೂರಾರು ಕಾರ್ಯಕರ್ತರು ಎಸಿಬಿ ವಿರುದ್ಧ ಆಕ್ರೋಶ ಹೊರಹಾಕಿದರು. ಬೇಕಂತಲೇ ದಾಳಿ ಮಾಡಲಾಗಿದೆ ಎಂದು ಪ್ರತಿಭಟನೆಗೆ ಯತ್ನಿಸಿದರು. ಈ ವೇಳೆ ಜಮೀರ್​ರ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದು ವಾಪಸ್​ ಕಳುಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net