

ಮೈಸೂರು: ಈಕೆಗೆ ಮದ್ವೆ ಆಗಿ ಮೂರು ಮಕ್ಕಳಿದ್ದರೂ ಅಪ್ರಾಪ್ತ ಬಾಲಕನ ಜತೆ 2ನೇ ಮದುವೆ ಆಗುವ ತವಕ. ಆ ಬಾಲಕನ ಮನೆಗೆ ಬಂದು ನಮ್ಮಿಬ್ಬರಿಗೂ ಮದ್ವೆ ಮಾಡಿಕೊಡಿ ಎಂದು ಹಠ ಮಾಡಿದ್ದಾಳೆ. ಪಂಚಾಯ್ತಿಗೂ ಬಗ್ಗಿಲ್ಲ... ಅಷ್ಟೇ ಅಲ್ಲ, ಇದಕ್ಕೂ ಮುನ್ನ ಬಾಲಕನನ್ನು 3 ದಿನ ಟ್ರಿಪ್ಗೆ ಕರೆದೊಯ್ದು ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾಳೆ!
ಇಂತಹ ವಿಚಿತ್ರ ಘಟನೆ ನಂಜನಗೂಡು ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ 35 ವರ್ಷದ ಮಹಿಳೆಗೆ 17 ವರ್ಷದ ಬಾಲಕನ ಪರಿಚಯವಾಗಿತ್ತು. ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡ ಇಬ್ಬರೂ ಪರಸ್ಪರ ಚಾಟಿಂಗ್ ಮಾಡುತ್ತಿದ್ದರು. ಹೀಗೆ ಮೆಸೇಜ್-ಕಾಲ್ ಮಾಡುತ್ತಾ ಆಪ್ತರಾದ ಇಬ್ಬರೂ ಡೇಟಿಂಗ್ ಮಾಡಲು ಶುರು ಮಾಡಿದ್ದಾರೆ.
ಬಾಲಕನ ಜತೆ ಡೇಟಿಂಗ್ ಮಾಡುತ್ತಿದ್ದ ಮಹಿಳೆಗೆ ಈಗಾಗಲೇ ಬೇರೊಬ್ಬನ ಜತೆ ಮದುವೆ ಆಗಿದ್ದು, ಮೂವರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿ ಮಕ್ಕಳ ಜತೆ ವಾಸಿಸುತ್ತಿರುವ ಮಹಿಳೆ, ಆ ಬಾಲಕನನ್ನು ಕರೆದುಕೊಂಡು 3 ದಿನ ಪ್ರವಾಸಕ್ಕೂ ಹೋಗಿ ಬಂದಿದ್ದಾಳೆ. ಪ್ರವಾಸದ ನಂತರ ವಾಪಸ್ ಮನೆಗೆ ಬಂದ ಅಪ್ರಾಪ್ತ ಬಾಲಕ, 'ನನ್ನ ಮೊಬೈಲ್ ಕಳೆದುಹೋಗಿತ್ತು. ಹಾಗಾಗಿ ನಿಮಗೆ ಕರೆ ಮಾಡಲು ಆಗಲಿಲ್ಲ' ಎಂದು ಮನೆಯರ ಬಳಿ ಕಥೆ ಕಟ್ಟಿದ್ದ. ನಂತರ ಈತನ ಮನೆಗೆ ಬಂದ ಆ ಮಹಿಳೆ, 'ನಾನು ನಿಮ್ಮ ಮಗನನ್ನ ಪ್ರೀತಿಸುತ್ತಿರುವೆ. ನಾವಿಬ್ಬರೂ 3 ದಿನ ಒಟ್ಟಿಗೆ ಇದ್ದೆವು. ನಿಮ್ಮ ಮಗನ ಜತೆ ನನ್ನ ಮದುವೆ ಮಾಡಿ' ಎಂದು ಬಾಲಕನ ಪೋಷಕರನ್ನು ಕೇಳಿಕೊಂಡಿದ್ದಾಳೆ. ಈ ವಿಷ್ಯ ಕೇಳಿ ಬೆಚ್ಚಿಬಿದ್ದ ಪಾಲಕರು, 'ಯಾರು ನೀನು? ಈ ಮದ್ವೆ ಅಸಾಧ್ಯ! ನಿನ್ನ ವಯಸ್ಸೇನು, ನನ್ನ ಮಗನ ವಯಸ್ಸೇನು? ಎಲ್ಲಿಯ ಸಂಬಂಧ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೂ ಪಟ್ಟು ಬಿಡದ ಆ ಮಹಿಳೆ, ಮದುವೆ ಮಾಡಿಸಿ ಎಂದು ಹಠ ಹಿಡಿದಿದ್ದಳು.
ಗ್ರಾಮಸ್ಥರು ಪಂಚಾಯಿತಿ ಮಾಡಿದರೂ ಮಹಿಳೆ ಮಾತ್ರ 'ನನ್ನ ಪ್ರಿಯಕರನ ಜತೆಗೇ ನನ್ನ ಮದ್ವೆ ಆಗಬೇಕು' ಎಂದು ಪಟ್ಟು ಹಿಡಿದ್ದಿದ್ದಳು. ಕೊನೆಗೆ ಬಾಲಕನ ಪಾಲಕರು 'ನನ್ನ ಮಗನನ್ನು ಉಳಿಸಿಕೊಡಿ' ಎಂದು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 3 ಮಕ್ಕಳ ತಾಯಿ ಮಹಿಳೆ ಮತ್ತು ಅಪ್ರಾಪ್ತ ಬಾಲಕ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.