

ಮಹಾಲಿಂಗಪುರ: ಸ್ಥಳೀಯ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಶ್ರೀ ಬನಶಂಕರಿದೇವಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮಹಾಲಿಂಗಪುರ ಸಾಂಸ್ಕೃತಿಕ ಉತ್ಸವ ಸಂಘದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಅ.3 ರಿಂದ 11 ರ ವರೆಗೆ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಬನಶಂಕರಿದೇವಿ ದೇವಸ್ಥಾನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಡಾ. ಬಿ.ಡಿ. ಸೋರಗಾಂವಿ, ಬಿ.ಸಿ. ಪೂಜಾರಿ, ಅ.3 ರಂದು ಬೆಳಗ್ಗೆ 8 ಗಂಟೆಗೆ ಕುಂಭಮೇಳ ಸೇರಿ ವಿವಿಧ ವಾಧ್ಯಮೇಳಗಳೊಂದಿಗೆ ಸಿದ್ಧಾರೂಢ ಆಶ್ರಮದಿಂದ ಶ್ರೀದೇವಿ ಹಾಗೂ ದೇವರ ದಾಸಿಮಯ್ಯ ಮೂರ್ತಿಗಳನ್ನು ಮೆರವಣಿಗೆಯಲ್ಲಿ ಬನಶಂಕರಿ ದೇವಸ್ಥಾನಕ್ಕೆ ತರಲಾಗುವುದು. ಸಂಜೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
4 ರಂದು ವಿಜಯಪುರದ ಸಾಕ್ಷಿ ಹಿರೇಮಠ ಅವರಿಂದ ಗಾಯನ ಹಾಗೂ ಬೆಂಗಳೂರಿನ ವಾಗ್ಮಿ ಹಾರಿಕಾ ಮಂಜುನಾಥ ಇವರಿಂದ ಧರ್ಮ ಸಂಸ್ಕೃತಿ ದಿಕ್ಸೂಚಿ ಭಾಷಣ. 5 ರಂದು ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯಾ ಪಾಟೀಲರಿಂದ ಗಾಯನ, 6 ರಂದು ಮಹಾಲಿಂಗಪುರದ ವಿ.ಕೆ. ಡ್ಯಾನ್ಸ್ ಮತ್ತು ಫಿಟ್‌ನೆಸ್ ಅಕಾಡೆಮಿ ಅವರಿಂದ ಮಕ್ಕಳ ನೃತ್ಯ, 7ರಂದು ಬೀದರ್‌ನ ನವಲಿಂಗ ಪಾಟೀಲ ಅವರಿಂದ ಹಾಸ್ಯ ಸಂಜೆ, 8 ರಂದು ಹೊಸಪೇಟೆಯ ಶ್ರೀ ನಾಟ್ಯನಾದ ಕಲಾ ಕೇಂದ್ರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶ್ರೀ ಅನ್ನಪೂಣೇಶ್ವರಿ ಮಹಿಳಾ ಸಂಘದಿಂದ ಕುಂಕುಮಾರ್ಚನೆ, 9 ರಂದು ಸ್ಥಳೀಯ ರವೀಂದ್ರ ಸೋರಗಾಂವಿ ಹಾಗೂ ಅಥಣಿಯ ಸುಷ್ಮಾ ನಂದಗಾಂವ ಅವರಿಂದ ಸಂಗೀತ, 10 ರಂದು ಕಿರುತೆರೆ ಸೂಪರ್‌ಸ್ಟಾರ್ ದಿಯಾ ಹೆಗಡೆ ಅವರಿಂದ ಸಂಗೀತ, 11ರಂದು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶೋಭಾ ಹುಣಶ್ಯಾಳ ಬಂಧುಗಳಿಂದ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಡಳಿತ ಮಂಡಳಿಯ ಪ್ರಭು ಬೆಳಗಲಿ, ಮಲ್ಲಪ್ಪ ಭಾವಿಕಟ್ಟಿ, ನಾರಾಯಣ ಕಿರಗಿ, ಲಕ್ಕಪ್ಪ ಚಮಕೇರಿ, ಸಿದಗಿರೆಪ್ಪ ಕಾಗಿ, ರಾಜೇಶ ಭಾವಿಕಟ್ಟಿ, ಗುರುಪಾದ ಅಂಬಿ, ಶಂಕರ ಅಂಬಿ, ಪ್ರಕಾಶ ಬಾಡನವರ, ಮಹಾದೇವ ಹುಣಶ್ಯಾಳ, ಸುನಿಲ ಜಮಖಂಡಿ, ಶ್ರೀಶೈಲ ನುಚ್ಚಿ, ರಾಜು ಚಮಕೇರಿ, ಮಲ್ಲು ನಿಂಬರಗಿ, ಚಂದ್ರು ಕಾಗಿ, ಗಂಗಪ್ಪ ಕರಡಿ, ಜಿ.ಎಸ್. ಗೊಂಬಿ, ಶಿವಾನಂದ ಕಿತ್ತೂರ ಇತರರಿದ್ದರು.
ನಿತ್ಯ ಶ್ರೀಗಳಿಂದ ಆಶೀರ್ವಚನ: ನಿತ್ಯ ಸಂಜೆ 7 ರಿಂದ 8ರ ವರೆಗೆ ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳಿಂದ ಶ್ರೀದೇವಿ ಪುರಾಣ, ನಂತರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅ. 5 ರಂದು ಸಂಜೆ 5 ಗಂಟೆಗೆ ಕೊಪ್ಪಳ ಗವಿಸಿದ್ಧೇಶ್ವರ ಮಠದ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳಿಂದ ಆಶೀರ್ವಚನ ನಡೆಯಲಿದೆ.
ಆಯಾ ದಿನಗಳಂದು ಮರೇಗುದ್ದಿಯ ಡಾ. ನಿರುಪಾಧೀಶ್ವರ ಮಹಾಸ್ವಾಮಿಗಳು, ಮಹಾಲಿಂಗಪುರದ ಸಹಜಾನಂದ ಮಹಾಸ್ವಾಮಿಗಳು, ಮೈಂದರಗಿ ಗುರು ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇವರು, ಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯರು, ಅಮ್ಮಲಝರಿಯ ಸ್ವಾಮಿ ಜ್ಞಾನಮಯಾನಂದ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.