ಏ.20ರ ತನಕ ಕಾಲುವೆಗೆ ನೀರು ಹರಿಸಿ

18SND-04
ಬಸವಂತರಾಯಗೌಡ
Published on

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಗೆ ಏ.20ರವರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಿ, ಭತ್ತ ಬೆಳೆ ಉಳಿಸಬೇಕೆಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯಕ್ಕೆ ಸಂಬಂಧಿಸಿದಂತೆ ಐಸಿಸಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಿ ಜನಪ್ರತಿನಿಧಿಗಳು ಕೈತೊಳೆದುಕೊಳ್ಳುತ್ತಿದ್ದಾರೆ. ಜಲಾಶಯದ ನೀರಿನ ಪ್ರಮಾಣ, ಹರಿಸುವಿಕೆ, ನೀರಾವರಿ ಪ್ರದೇಶ ಈ ಬಗ್ಗೆ ಸರಿಯಾಗಿ ಚರ್ಚಿಸಲ್ಲ. ಈ ಮೊದಲೇ ಸಿದ್ಧಗೊಂಡ ವರದಿ ನೋಡಿಕೊಂಡೇ ನಿರ್ಧಾರ ಕೈಗೊಳ್ಳುತ್ತಿರುವುದು ಸರಿಯಲ್ಲ. ಬೆಂಗಳೂರಿನಲ್ಲಿ ಐಸಿಸಿ ಸಭೆ ಮಾಡುವುದು ಖಂಡನೀಯ ಎಂದರು.

ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯ ಎಡ ಭಾಗದಲ್ಲಿ ಐದಾರು ಕಿಮೀ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನೀರಾವರಿ ಮಾಡಿಕೊಳ್ಳಲಾಗಿದೆ. ಇದರಿಂದ ಮೇಲ್ಭಾಗದಲ್ಲಿ ಯಥೇಚ್ಛವಾಗಿ ನೀರು ಹರಿದು ಹೋಗಿ ಕೆಳಭಾಗಕ್ಕೆ ನೀರಿಲ್ಲದಂತ ವಾತಾವರಣ ಸೃಷ್ಟಿಯಾಗಿದೆ. ಇದರ ಹಿಂದೆ ಬಲಾಢ್ಯರ ಕೈವಾಡ ಇದೆ.

ಕಳೆದ ಹದಿನೈದು ವರ್ಷಗಳಿಂದ 54ನೇ ಉಪಕಾಲುವೆ ವ್ಯಾಪ್ತಿಯಲ್ಲಿ 6ಫೀಟ್ ನೀರು ಕೊಡಲಾಗುತ್ತಿತ್ತು. ಈಗ ಕೇವಲ 5ಫೀಟ್ ನೀರು ಹರಿಸುತ್ತಿರುವುದರಿಂದ ಸಮಸ್ಯೆ ಹೆಚ್ಚಿದೆ. ಕೂಡಲೇ ಏ.20ರವರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ವಿರೂಪಾಕ್ಷಗೌಡ, ಪ್ರಮುಖರಾದ ನರೇಂದ್ರಬಾಬು, ಹನುಮಂತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net