ಶ್ರೀರಂಗಪಟ್ಟಣದಲ್ಲಿ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ... ಎಂದ ಕಾಳಿ ಮಠದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ

1220954
Published on

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ವಿವಾದಿತ ಹೇಳಿಕೆ ನೀಡಿ ವಿಡಿಯೋ ಹರಿಬಿಟ್ಟಿದ್ದ ಕಾಳಿ ಮಠದ ಋಷಿಕುಮಾರಸ್ವಾಮಿ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಜೆಎಂಎಫ್​ಸಿ ಕೋರ್ಟ್​ ಮಂಗಳವಾರ ಆದೇಶಿಸಿದೆ.

ಜಾಮೀನು ಕೋರಿ ಸ್ವಾಮೀಜಿ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನಾಳೆಗೆ ಆದೇಶ ಕಾಯ್ದಿರಿಸಲಾಗಿದೆ.

ಏನಿದು ಪ್ರಕರಣ?: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಮ್ಮಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಸಮನ್ವಿ ಅಸ್ಥಿ ವಿಸರ್ಜನೆ ನಿಮಿತ್ತ ಭಾನುವಾರ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದ ಋಷಿ ಕುಮಾರಸ್ವಾಮಿ, ಮಸೀದಿ ಮುಂಭಾಗದಲ್ಲೇ ನಿಂತು ವಿವಾದಿತ ಹೇಳಿಕೆ ಉಲ್ಲೇಖಿಸಿ ವಿಡಿಯೋ ಚಿತ್ರೀಕರಣ ನಡೆಸಿ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದಾರೆ. ವಿಡಿಯೋ ವೈರಲ್​ ಆಗಿದೆ. ಈ ಹಿನ್ನೆಲೆ ಮಸೀದಿಗೆ ಭದ್ರತೆ ಹೆಚ್ಚಿಸುವ ಕುರಿತು ವಕ್ಫ್​ ಬೋರ್ಡ್​ ಸಮಿತಿ ಹಾಗೂ ಕೇಂದ್ರ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್​ ಠಾಣೆಗೆ ಮನವಿ ಮಾಡಿವೆ. ಮಸೀದಿ ಭದ್ರತೆಗೆ ನಿಯೋಜನೆಗೊಂಡ ಸಿಬ್ಬಂದಿ ನೀಡಿರುವ ಲಿಖಿತ ಮಾಹಿತಿ ಪ್ರಕಾರ ವಿಡಿಯೋದಲ್ಲಿ ಮಾತನಾಡಿರುವ ಋಷಿಕುಮಾರಸ್ವಾಮಿ ಹಾಗೂ ವಿಡಿಯೋ ಚಿತ್ರೀಕರಿಸಿದ ಇಬ್ಬರ ಮೇಲೂ ದೂರು ದಾಖಲಾಗಿದೆ.

ಈ ಪ್ರಕರಣ ಸಂಬಂಧ ಮಂಗಳವಾರ ಸ್ವಾಮೀಜಿಯನ್ನು ಶ್ರೀರಂಗಪಟ್ಟಣ​ ಠಾಣೆ ಪೊಲೀಸರು ವಶಕ್ಕೆ ಪಡೆದು ಕರೆತಂದರು. ಪೊಲೀಸ್ ಠಾಣೆಗೆ ಕರೆತರುವ ಮುನ್ನ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ಸ್ವಾಮೀಜಿ, ನಾನು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ನಮ್ಮಮ್ಮ ಸೂಪರ್​ ಸ್ಟಾರ್​ ಖ್ಯಾತಿಯ ಸಮನ್ವಿ ಅಸ್ಥಿ ವಿಸರ್ಜನೆ ನಿಮಿತ್ತ ಭಾನುವಾರ ಶ್ರೀರಂಗಪಟ್ಟಣಕ್ಕೆ ಆಗಮಿಸಿದ್ದೆ. ಈ ವೇಳೆ ಅದೇ ರಸ್ತೆಯಲ್ಲಿ ನನ್ನ ಕಣ್ಣಿಗೆ ಕಾಣಿಸಿತು ಅದು ಮಸೀದಿ ಅಲ್ಲ, ನನ್ನ ಹನುಮ ದೇಗುಲ. ಅ ನನ್ನ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ. ಅಯೋಧ್ಯೆಯಲ್ಲಿ ರಾಮ ಮಂದಿರ. ಅದೇ ರೀತಿ ಶ್ರೀರಂಗಪಟ್ಟಣದಲ್ಲಿ ಹನುಮ ಮಂದಿರ‌ ಕಟ್ಟುತ್ತೇವೆ. ಮಸೀದಿ‌ ನನಗೆ ದೇವಾಲಯದ ರೀತಿ‌ ಕಾಣಿಸಿದೆ. ಅದನ್ನೇ ಹೇಳಿದ್ದೇನೆ. ಹಿಂದುಪರ ಸಂಘಟನೆಗಳೆಲ್ಲ ಒಂದಾಗಿರಿ, ಶ್ರೀರಂಗಪಟ್ಟಣದಲ್ಲಿ ಮತ್ತೊಮ್ಮೆ ಹನುಮ ಮಂದಿರ ಕಟ್ಟೇ ಕಟ್ಪುತ್ತೀವಿ ಎಂದಿದ್ದರು.

ಮಧ್ಯಾಹ್ನ ಕಾಳಿ ಮಠದ ಸ್ವಾಮೀಜಿ ಅವರನ್ನು ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿದರು. ಶ್ರೀಗಳು ತಪ್ಪೇನೂ ಮಾಡಿಲ್ಲ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕೆಲಸ ಮಾಡಿಲ್ಲ ಎಂದ ಸ್ವಾಮಿ ಪರ ವಕೀಲ ಬಾಲರಾಜ್​, ಋಷಿಕುಮಾರಸ್ವಾಮಿ ಅವರ ಹೇಳಿಕೆ ವಿವಾದಾತ್ಮಕ ಅಲ್ಲ. ಮನಸ್ಸಿನ ನೋವನ್ನ ಅವರು ಹೊರಹಾಕಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸಮನ್ವಿ ಅಸ್ತಿ ವಿಸರ್ಜನೆಗೆ ಸ್ವಾಮೀಜಿ ಶ್ರೀರಂಗಪಟ್ಟಣಕ್ಕೆ ಬಂದಿದ್ರು. ವಾಪಾಸ್ ತೆರಳುವ ವೇಳೆ ಮಸೀದಿಯಲ್ಲಿನ ಹನುಮ ದೇವಾಲಯದ ಕುರುಹು ಕಂಡು ಮನಸ್ಸಿನ ನೋವು ಹೊರಹಾಕಿದ್ದಾರೆ. ಕಾನೂನು ಹೋರಾಟದ ಮೂಲಕ ಮಸೀದಿ ಕೆಡವಿ ಮಂದಿರ ಕಟ್ಟುತ್ತೇವೆ ಎಂಬುದು ಅವರ ಹೇಳಿಕೆಯ ಭಾವ ಎಂದು ಸಮರ್ಥಿಸಿಕೊಂಡರು. ಸ್ವಾಮಿಗಳು ಧಾರ್ಮಿಕ ಕಾರ್ಯ, ವಿವಿಧ ಸಮಾಜಸೇವಾ ಕಾರ್ಯ ಮಾಡ್ತಿದ್ದಾರೆ. ಹೀಗಾಗಿ ಇವರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಸಾಕ್ಷ್ಯ ನಾಶ, ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹಿನ್ನೆಲೆ ಜಾಮೀನು ನಿರಾಕರಿಸುವಂತೆ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು. ವಾದ-ವಿವಾದ ಆಲಿಸಿದ ಕೋರ್ಟ್​, ತೀರ್ಪು ಕಾಯ್ದಿರಿಸಿದೆ. ಸದ್ಯ ಮಂಡ್ಯ ಜೈಲಿಗೆ ಕಾಳಿ ಮಠದ ಸ್ವಾಮಿಯನ್ನು ಶ್ರೀರಂಗಪಟ್ಟಣ ಪೊಲೀಸರು ಕರೆದೊಯ್ಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net