ಗಮನ ಸೆಳೆದ 111 ಅಡಿ ಉದ್ದದ ಅಗರಬತ್ತಿ

31
Published on

ಮೈಸೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಸೋಮವಾರ ಸೈಕಲ್ ಪ್ಯೂರ್ ಅಗರ್ ಬತ್ತೀಸ್ ಸಂಸ್ಥೆಯಿಂದ ಸಿದ್ಧಪಡಿಸಿದ್ದ ಪರಂಪರೆ ಹೆಸರಿನ 111 ಅಡಿ ಉದ್ದದ ಅಗರಬತ್ತಿಯನ್ನು ಹಚ್ಚಲಾಯಿತು.
10 ಬಗೆಯ ಮೂಲ ವಸ್ತುಗಳನ್ನು ಬಳಸಿ ಊದುಬತ್ತಿ ತಯಾರಿಸಿದ್ದು, ಗಂಧದ ಮರದ ಪುಡಿ ಜತೆಗೆ ಇದ್ದಿಲು, ಜೇನು, ದೇವದಾರು, ಬಿದಿರು, ಗುಗ್ಗುಲು, ಜಿಗುಟು, ಬೆಲ್ಲದ ಮಿಶ್ರಣ, ಸಾಸಿವೆ, ಸಾಂಬ್ರಾಣಿ ಹಾಗೂ ಬಿಳಿ ಸಾಸಿವೆ ಬಳಕೆ ಮಾಡಲಾಗಿತ್ತು. 18 ನುರಿತ ಕುಶಲಕರ್ಮಿಗಳು 23 ದಿನಗಳಲ್ಲಿ ಇದನ್ನು ಸಿದ್ಧಪಡಿಸಿದ್ದರು.
ಸಂಸದ ಪ್ರತಾಪ್ ಸಿಂಹ, ಶಾಸಕ ಟಿ.ಎಸ್.ಶ್ರೀವತ್ಸ, ಶಿಲ್ಪಿ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ ಊದುಬತ್ತಿ ಬೆಳಗಿಸಿದರು. ಈ ವೇಳೆ ಮಾತನಾಡಿದ ಸರಸ್ವತಿ ಅವರು, ನಮ್ಮ ಕುಟುಂಬದ ಐದು ತಲೆಮಾರುಗಳು ಶಿಲ್ಪಕಲೆಗೆ ತಮ್ಮ ಬದುಕನ್ನು ಮೀಸಲಿಟ್ಟಿವೆ. ನಮ್ಮ ಕುಟುಂಬದ ಕೆಲಸವನ್ನು ಗುರುತಿಸಿ ಸೈಕಲ್ ಪ್ಯೂರ್ ಅಗರಬತ್ತಿ ಪ್ರೋತ್ಸಾಹ ನೀಡುತ್ತಿರುವುದು ನಿಜವಾಗಿಯೂ ಹರ್ಷದಾಯಕವಾಗಿದೆ. ಇದು ನಮ್ಮ ಕುಟುಂಬಕ್ಕೆ ಮಾತ್ರವಲ್ಲದೆ, ಇಡೀ ಕಲಾತ್ಮಕ ಸಮುದಾಯಕ್ಕೆ ಸಂದ ಗೌರವವಾಗಿದೆ ಎಂದು ಸಂತಸ ಹಂಚಿಕೊಂಡರು.
ಎನ್‌ಆರ್ ಗ್ರೂಪ್ ಅಧ್ಯಕ್ಷ ಗುರು ಮಾತನಾಡಿ, ನಮ್ಮದು ಅಧ್ಯಾತ್ಮದಲ್ಲಿ ಬೇರೂರಿರುವ ಬ್ರ್ಯಾಂಡ್. ಕಲಾವಿದರ ಸಮುದಾಯವನ್ನು ಬೆಂಬಲಿಸುವುದು ನಮ್ಮ ನಿರಂತರ ಬದ್ಧತೆ. ಜನರ ಜೀವನದಲ್ಲಿ ನಾವು ಭರವಸೆಯ ಮೂಲವಾಗಲು ಬಯಸುತ್ತೇವೆ. ಈ 111 ಅಡಿ ಅಗರಬತ್ತಿ ಆ ಬದ್ಧತೆಯ ಸಂಕೇತ. ಕುಶಲಕರ್ಮಿಗಳು ತಮ್ಮ ಕೆಲಸದ ಮೂಲಕ ಜಗತ್ತಿಗೆ ಅದರ ಪರಿಮಳದ ಸಂತೋಷ ಹರಡುತ್ತಾರೆ ಎಂದರು.
ಸೈಕಲ್ ಪ್ಯೂರ್ ಅಗರ್ ಬತ್ತೀಸ್ ಸಂಸ್ಥೆ ಗೋವಾ ಹಾಗೂ ಮಹಾರಾಷ್ಟ್ರಕ್ಕೂ 111 ಅಡಿ ಉದ್ದದ ಗಂಧದಕಡ್ಡಿ ಕಳುಹಿಸಿದ್ದು, ಅಲ್ಲಿಯೂ ಸೋಮವಾರ ಮುಂಜಾನೆ ಊದುಬತ್ತಿ ಹೊತ್ತಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಈ ಗಂಧದಕಡ್ಡಿ ಇಡೀ ದಿನ ಉರಿಯಲಿದೆ ಎಂದು ತಿಳಿಸಿದರು.
ಸಂಸ್ಥೆಯ ಸದಸ್ಯರಾದ ಕಿರಣ್ ರಂಗ, ವಿಷ್ಣು ರಂಗ, ಅನಿರುದ್ಧ ರಂಗ, ನಿಖಿಲ್ ರಂಗ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net