

ಕಲಬುರಗಿ: ಕರೊನಾದಿಂದ ರಕ್ಷಿಸಿಕೊಳ್ಳಲು ಮನೆಯಲ್ಲೇ ಲಭ್ಯವಿರುವ ವಸ್ತುಗಳನ್ನು ಔಷಧಿಯಾಗಿ ಬಳಕೆ ಮಾಡಿಕೊಳ್ಳುವ ಜತೆಗೆ ರೋಮನ್ ನಂಬರ್ ಟೇಪ್ ಸ್ಟೀಕ್ ಅಂಟಿಸುವ ಮೂಲಕ ಪದೆ ಪದೇ ಕೈ ಮುಖದ ಕಡೆಗೆ ಹೋಗುವುದನ್ನು ತಡೆಯಬಹುದಾಗಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಜಿ-99 ತಂಡದಿಂದ ಮಾಡಲಾಗುವುದು ಎಂದು ಡಾ.ಶರಣಬಸವ ಹವಾಲ್ದಾರ್ ಮತ್ತು ಜಿ-99 ಗೆಳೆಯರ ಬಳಗದ ಮುಖ್ಯಸ್ಥ ಶರಣು ಪಪ್ಪಾ ತಿಳಿಸಿದರು.
ಈಗಾಗಲೇ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ಕರೊನಾ ಔಷಧಿ ಹೆಸರಿನಲ್ಲಿ ಸಾರ್ವಜನಿಕರಿಗೆ ಹಣ ವಸೂಲಿ ಮಾಡಲಾಗುತ್ತಿದೆ. ಜನತೆ ಈಗಾಗಲೇ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತಿದೆ. ಆದರೂ ಕೆಲ ಸಂದರ್ಭಗಳಲ್ಲಿ ಸೋಂಕಿಗೆ ತುತ್ತಾಗುವ ಪರಿಸ್ಥಿತಿ ಬರುತ್ತದೆ. ಹೀಗಾಗದಂತೆ ಎಚ್ಚರಿಕೆ ವಹಿಸುಲು ತಿಳಿಸಲು ಅರಿವು ಕಾರ್ಯಕ್ರಮ ನಡೆಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ಶ್ರೀಮಂತ ಸಂಸ್ಕೃತಿ ಹಾಗು ಪಾರಂಪರಿಕ ಗೃಹ ಔಷಧ ಬಳಕೆ ಅರಿವು ಜನರಲ್ಲಿದೆ. ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಕರೊನಾ ನಿಯಂತ್ರಿಸಬಹುದು. ಆಕಳು ಹಾಗೂ ತೆಂಗಿನಮರದ ಉತ್ಪನ್ನ ಹೆಚ್ಚು ಸಹಕಾರಿ ಎಂದು ಡಾ.ಶರಣಬಸಪ್ಪ ಹೇಳಿದರು.
ಮಧುಮೇಹ, ರಕ್ತದೊತ್ತಡ ಸೇರಿ ಸಾಮಾನ್ಯ ಕಾಯಿಲೆಗಳನ್ನು ನಿಯಂತ್ರಿಸಲು ನಿತ್ಯ ರಾತ್ರಿ 2 ಹನಿ ಆಕಳ ತುಪ್ಪ ಮೂಗಿನಲ್ಲಿ ಹಾಕಿಕೊಳ್ಳಬೇಕು. ಮನೆಯಿಂದ ಹೊರ ಬರಬೇಕಾದರೆ ಬಟ್ಟೆ ಧರಿಸದೆ ಉಳಿಯುವ ದೇಹದ ಭಾಗಕ್ಕೆ ತೆಂಗಿನ ಎಣ್ಣೆ ಸವರಿಕೊಳ್ಳಬೇಕು ಇದರಿಂದ ಅರೋಗ್ಯ ಸಂರಕ್ಷಣೆಯಾಗಲಿದೆ. ಈ ಎರಡು ಅಂಶಗಳು ದೇಹದಲ್ಲಿ ಉತ್ಪತ್ತಿಯಾಗುವ ಪ್ಯಾಟಿ ಆಸಿಡ್ ಸುಡುತ್ತವೆ. ಹೀಗಾಗಿ ರೋಗ ನಿಯಂತ್ರಣಕ್ಕೆ ಬರುತ್ತವೆ. ಇನ್ನು ಯೋಗ, ಪ್ರಾಣಾಯಾಮ ಮೂಲಕ ಶ್ವಾಸಕೋಶ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿವರಿಸಿದರು.
ವೈದ್ಯಕೀಯ ಭಾಷೆಯಲ್ಲಿ ಮೈಕ್ರೋಪೋರ್ ಸರ್ಜಿಕಲ್ ಟೇಪ್ ಎಂದು ಕರೆಯಲಾಗುವ ಜಿಗುಟು ಪಟ್ಟಿಯನ್ನು ಮೊಣಕೈ ಭಾಗದಲ್ಲಿ ರೋಮನ್ ಸಂಖ್ಯೆ 2 ಆಕಾರದಲ್ಲಿ ಹಚ್ಚುವುದರಿಂದ ಕೈಯನ್ನು ಸುಲಭವಾಗಿ ಮುಖದ ಬಳಿ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಇದರಿಂದ ವೈರಸ್ ದೇಹ ಪ್ರವೇಶಿಸಲು ಅವಕಾಶ ಕೊಡುವ ಮುಖ ಮೇಲಿಂದ ಮೇಲೆ ಮುಟ್ಟಿಕೊಳ್ಳುವುದು ತಪ್ಪುತ್ತದೆ ಎಂದು ವಿವರಣೆ ನೀಡಿದರು. ಸ್ಯಾಮಜಿಯೋಸ್ ಆಸ್ಪತ್ರೆ ಮುಖ್ಯಸ್ಥ ನಾಗೇಂದ್ರ ಇದ್ದರು.