ಪೌರಕಾರ್ಮಿಕರ ನಿಯೋಜನೆ ಅಕ್ರಮ ತನಿಖೆಗೆ ಸೂಚನೆ

1506Klb13
Published on

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಕೆಲ ವಾರ್ಡ್​ಗಳಿಗೆ ಅಗತ್ಯವಿರುವಷ್ಟು ಪೌರಕಾರ್ಮಿಕರು ನಿಯೋಜಿಸದೆ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದರಿಂದ ಈ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರಿಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಭೈರತಿ ಸೂಚಿಸಿದರು.
ನಗರದಲ್ಲಿ ಸೋಮವಾರ ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ವಿಚಾರಣೆ ಮಾಡಿ ಮುಂದಿನ ತಿಂಗಳು ವರದಿ ನೀಡುವಂತೆ ತಿಳಿಸಿದರು.
ಪರಿಸರ ಇಂಜಿನಿಯರ್ ಮುನಾಫ್ ಪಟೇಲ್ ಮಾತನಾಡಿ, ನಗರದಲ್ಲಿ 55 ವಾರ್ಡ್​ಗಳಲ್ಲಿ ಮನೆ-ಮನೆ ಕಸ ಸಂಗ್ರಹಣೆಗೆ 351 ಮಂದಿ, ಕಸಗೂಡಿಸುವಿಕೆಗೆ 651, ಸಾಗಾಣಿಕೆ 166 ಮಂದಿ ಸೇರಿ ಒಟ್ಟು 1168 ಪೌರಕಾರ್ಮಿಕರಿದ್ದಾರೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ, ಸ್ವಚ್ಛತೆ ಎಂಬುದು ಕನಸಾಗಿದೆ. ಪೌರ ಕಾರ್ಮಿಕರ ನಿಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು. ಇದಕ್ಕೆ ಶಾಸಕ ಬಸವರಾಜ ಮುತ್ತಿಮೂಡ ಧ್ವನಿಗೂಡಿಸಿ ನಮ್ಮಲ್ಲಿ ಹಾಗೆ ಇದೆ ಎಂದರು.
35ನೇ ವಾರ್ಡ್​ನಲ್ಲಿ 10 ಸಾವಿರ ಜನರಿದ್ದು 44 ಕಾರ್ಮಿಕರು ಬೇಕು. ಈಗಲ್ಲಿ 22 ಜನರಿದ್ದಾರೆ. ಕಸಗೂಡಿಸುವರು, ಕಸ ಸಂಗ್ರಹಿಸುವರು, ಚಾಲಕರು ಇದ್ದಾರೆ ಎಂದು ಪರಿಸರ ಅಭಿಯಂತರ ಮುನಾಫ್ ಪಟೇಲ್ ಸಮರ್ಥಿಸಿಕೊಂಡರು. ಉತ್ತರಿಂದ ತೃಪ್ತರಾಗದ ಸಚಿವರು, ತನಿಖೆಗೆ ಸೂಚಿಸಿದರು.
ಪಾಲಿಕೆ ಉಪ ಆಯುಕ್ತ ಆರ್.ಪಿ. ಜಾಧವ್ ಮಾಹಿತಿ ನೀಡಿ, 2020-21ನೇ ಸಾಲಿನಲ್ಲಿ ಏಪ್ರಿಲ್-1ರಿಂದ ಮೇ 31ರವರೆಗೆ 4715.48 ಲಕ್ಷ ರೂಪಾಯಿ ಪೈಕಿ ಕೇವಲ 486.42 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಒಟ್ಟು 4229.06 ಲಕ್ಷ ರೂಪಾಯಿ ತೆರಿಗೆ ವಸೂಲಿ ಬಾಕಿ ಇದೆ ಎಂದರು.
ಕನರ್ಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಲಬುರಗಿ ವಿಭಾಗದ ಇಂಜಿನಿಯರ್ ದಿಲೀಪ್ ಸಿಂಗ್ ಮಾತನಾಡಿ, ನೀರಿನ ಕರ ಮಾಸಿಕ ಸರಾಸರಿ ಬೇಡಿಕೆ 99.60 ಲಕ್ಷ ರೂ.ಗಳಿದ್ದು, 74 ಲಕ್ಷ ರೂ.ವಸೂಲಿಯಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಶರತ್. ಬಿ ಮಾತನಾಡಿದರು. ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರು, ಲಾಕ್ಡೌನ್ ಮುನ್ನ ಮತ್ತು ನಂತರ ಕೈಗೊಂಡ ಸ್ಯಾನಿಟೈಸಿಂಗ್, ಐಇಸಿ ಕ್ರಮಗಳನ್ನು ಪಿಪಿಟಿ ಮೂಲಕ ವಿವರಿಸಿದರು. ಸಭೆಯಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಡಾ.ಅವಿನಾಶ ಜಾಧವ್, ರಾಜಕುಮಾರ ಪಾಟೀಲ ತೇಲ್ಕೂರ, ಕುಡಾ ಆಯುಕ್ತ ರಾಚಪ್ಪ, ಪಾಲಿಕೆ ಮುಖ್ಯ ಇಂಜಿನಿಯರ್ ಎಸ್.ಎನ್. ದಿನೇಶ್, ಕಾರ್ಯಪಾಲಕ ಇಂಜಿನಿಯರ್ ಬಸವರಾಜ ಇತರರಿದ್ದರು.
ಸಿಟಿರೌಂಡ್ ಮಾಡಿದ ಭೈರತಿ : ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಮಂಗಳವಾರ ಪಾಲಿಕೆ ಕಚೇರಿಗೆ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯಗಳ ಪರಿಶೀಲಿಸಿ, ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಂತರ ಪಬ್ಲಿಕ್ ಗಾರ್ಡನ್ದಲ್ಲಿ ಸಸಿ ನೆಟ್ಟು ನೀರುಣಿಸಿದರು.
ಬಳಿಕ ಜಲಭವನದ ಕಟ್ಟಡಕ್ಕೆ ಭೇಟಿ ನೀಡಿ ಕಾಮಗಾರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಪನೂರ ಒಳಚರಂಡಿ ಶುದ್ಧೀಕರಣ ಘಟಕಕ್ಕೂ ಭೇಟಿ ನೀಡಿದ ಸಚಿವರು ಅಲ್ಲಿನ ವಿನ್ಯಾಸ ವೀಕ್ಷಿಸಿದರು. ಅಲ್ಲದೆ ಹಲವು ಕಡೆಗಳಲ್ಲಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿ ಗುಣಮಟ್ಟದಿಂದ ನಿರ್ವಹಿಸಲು ತಾಕೀತು ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net