

ಜಯತೀರ್ಥ ಪಾಟೀಲ ಕಲಬುರಗಿ
ಕರೊನಾ ಕಾರ್ಮೋಡ ಮರೆಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯ ಏರಿಕೆ ಆಗುತ್ತಿದ್ದರಿಂದ ಲಾಕ್ಡೌನ್ ಅವಧಿ 15 ದಿನ ವಿಸ್ತರಿಸುವುದು ಒಳಿತು ಎಂದು ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿದ್ದರೂ ಸಾರ್ವಜನಿಕರ ಓಡಾಟ ನಿಂತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಇಡಿ ಜಿಲ್ಲೆಯನ್ನು ಸೀಲ್ ಮಾಡುವ ಸಾಧ್ಯತೆಗಳನ್ನೂ ತಳ್ಳುವಂತಿಲ್ಲ.
ಲಾಕ್ಡೌನ್ ಬಿಗಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾದರೂ ಜನರಿಗೆ ಮಾಹಿತಿ ನೀಡುವುದು ಸೂಕ್ತ. ಆದರೆ ಮಾಹಿತಿ ನೀಡದೆ ರಾತ್ರೋರಾತ್ರಿ ಎಲ್ಲ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಭಯ ಹುಟ್ಟಿಸುವಂತೆ ಆಗಬಾರದು.
ರಸ್ತೆ ಬಂದ್ ಮಾಡುವ ಒಂದೆರಡು ದಿನ ಮೊದಲು ಮಾಧ್ಯಮದ ಮೂಲಕ ಮಾಹಿತಿ ನೀಡಿ ಯಾವ್ಯಾವ ರಸ್ತೆ ಬಂದ್ ಮಾಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸೇವೆ ಸಲ್ಲಿಸುವವರು ಯಾವ ರಸ್ತೆ ಮೂಲಕ ಸಂಚರಿಸಬೇಕು ಎಂಬಿತ್ಯಾದಿ ವಿವರ ಒದಗಿಸುವುದು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮೀಷನರ್ ಕರ್ತವ್ಯವಾಗಿದೆ.
ಕಳೆದ ರಾತ್ರಿ ಹಳೇ ಜೇವರ್ಗಿ ರಸ್ತೆಯ ಕೆಳಸೇತುವೆಯನ್ನು ಏಕಾಏಕಿ ಬಂದ್ ಮಾಡಿ ಜನತೆಗೆ ಸಾಕಷ್ಟು ತೊಂದರೆ ಕೊಡಲಾಯಿತು. ಇಲ್ಲಿದ್ದ ಪೊಲೀಸ್ ಅಧಿಕಾರಿ ಯಾರ ಮಾತೂ ಕೇಳಲು ಸಿದ್ಧರಿರಲಿಲ್ಲ. ಇದೇ ರಸ್ತೆ ಮೂಲಕ ದಂಪತಿ ತಮ್ಮ ಕೂಸನ್ನು ಬೈಕ್ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದರು. ಆದರೆ ಬಿಡದಿದ್ದಕ್ಕೆ ದಂಪತಿ ಮಗನನ್ನು ಎತ್ತಿಕೊಂಡು ನಡೆದುಕೊಂಡು ಹೋಗುವ ದೃಶ್ಯ ಮನಕಲುಕುವಂತಿತ್ತು. ಇಲ್ಲಿನ ಪರಿಸ್ಥಿತಿಯನ್ನು ಪದೇಪದೆ ಕಮಿಷನರ್ ಗಮನಕ್ಕೆ ತಂದಾಗ ಮುತುವರ್ಜಿ ವಹಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ಹೊಸ ಜೇವರ್ಗಿ ರಸ್ತೆಯ ಕೆಳ ಸೇತುವೆ, ಸಂತೋಷ ಕಾಲನಿ(ಉದನೂರ ರಸ್ತೆ), ತಾರಫೈಲ್ ರಸ್ತೆ ಹೀಗೆ ಬುಧವಾರ ರಾತ್ರೋರಾತ್ರಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಲಾಯಿತು.
ಇನ್ನಷ್ಟು ಕಠಿಣ ಕ್ರಮ
ಕಲಬುರಗಿಯಲ್ಲಿ ಕರೊನಾ ಎರಡು ಬಲಿ ಪಡೆದಿದೆ. ಹೀಗಾಗಿ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದು ಅನಿವಾರ್ಯವೂ ಹೌದು. ಮೆಡಿಸಿನ್ ಹೊರತುಪಡಿಸಿ ಇನ್ಯಾವುದಕ್ಕೂ ಅವಕಾಶ ನೀಡುವ ಸಾಧ್ಯತೆ ಇಲ್ಲ. ತರಕಾರಿ, ದಿನಸಿ ಅಂಗಡಿಗಳಿಗೆ ನೀಡಿದ್ದ ವಿನಾಯಿತಿ ಹಿಂಪಡೆಯುವ ಸಾಧ್ಯತೆಯೂ ಇದೆ. ಕಲಬುರಗಿ ಜನ ಈ ಪರಿಸ್ಥಿತಿ ಎದುರಿಸಲು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಅತಿ ತುರ್ತು ಸಂದರ್ಭ ಹೊರತುಪಡಿಸಿ ಸಣ್ಣಪುಟ್ಟ ಕೆಲಸಗಳಿಗೆ ಹೊರಬರಲು ಸ್ವಯಂ ಕಡಿವಾಣ ಹಾಕಿಕೊಳ್ಳಬೇಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಡಳಿತದ ನಿರ್ಧಾರಕ್ಕೆ ಒಕ್ಕೊರಲ ಬೆಂಬಲ ನೀಡುವ ಅಗತ್ಯವಿದೆ.