

ಮಂಡ್ಯ: ಜಿಲ್ಲೆಯಲ್ಲಿ ಮಾ.9 ರಿಂದ 29ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 12,843 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಮಂಡ್ಯ ತಾಲೂಕಲ್ಲಿ 8, ಮದ್ದೂರಿನಲ್ಲಿ 5, ಮಳವಳ್ಳಿಯಲ್ಲಿ 3, ಕೆ.ಆರ್.ಪೇಟೆ 3, ನಾಗಮಂಗಲದಲ್ಲಿ 3, ಶ್ರೀರಂಗಪಟ್ಟಣದಲ್ಲಿ 2, ಪಾಂಡವಪುರದಲ್ಲಿ 3 ಸೇರಿದಂತೆ ಒಟ್ಟು 27 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ, ಗೋಡೆ ಗಡಿಯಾರ, ಡೆಸ್ಕ್, ಬೆಂಚ್ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಸುಸ್ಥಿತಿಯಲ್ಲಿರುವ ಬಗ್ಗೆ ಪರಿಶೀಲಿಸಬೇಕು. ಪರೀಕ್ಷೆ ನಡೆಯುವ ದಿನಗಳಂದು ಕೇಂದ್ರಗಳ ಸುತ್ತಲೂ 200 ಮೀ ಸುತ್ತಳತೆಯಲ್ಲಿ 144 ನೇ ಕಲಂ ಜಾರಿಗೊಳಿಸಿ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್, ಕಂಪ್ಯೂಟರ್ ಹಾಗೂ ಸೈಬರ್ ಸೆಂಟರ್‌ಗಳನ್ನು ಮುಚ್ಚಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳ ವಿರುದ್ಧ ದಂಡ ಪ್ರಕ್ರಿಯೆ ಸಂಹಿತೆ 1973ರ ಸೆಕ್ಷನ್ 107 ಮತ್ತು 110 ಅಡಿಯಲ್ಲಿ ಕ್ರಮವಹಿಸಲಾಗುವುದು. ಪ್ರತಿ ಕೇಂದ್ರಕ್ಕೆ ಒಬ್ಬರಂತೆ 27 ಮುಖ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಗಳ ವಿತರಣೆಗೆ 9 ಮಾರ್ಗಾಧಿಕಾರಿಗಳ ತಂಡ ರಚಿಸಲಾಗಿದೆ. ಪ್ರಶ್ನೆಪತ್ರಿಕೆ ವಿತರಣೆಗೆ ಬಳಸಲಾಗುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಬೇಕು. ಪ್ರಶ್ನೆಪತ್ರಿಕೆ ವಿತರಣೆ ಕಾರ್ಯದಲ್ಲಿ ಭಾಗವಹಿಸುವ ಎಲ್ಲ ಅಧಿಕಾರಿಗಳು ಜಿಲ್ಲಾ ಖಜಾನೆಯಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಿಸಿಕೊಳ್ಳಬೇಕು. ಪರೀಕ್ಷೆಗಳನ್ನು ಪಾರದರ್ಶಕತೆಯಿಂದ ನಡೆಸಲು ಪ್ರತಿ ಕೇಂದ್ರಗಳಿಗೆ ಭೇಟಿ ನೀಡಲು ಎ ಅಥವಾ ಬಿ ಗುಂಪಿನ ಅಧಿಕಾರಿಗಳ ವಿಚಕ್ಷಣಾ ಜಾಗೃತದಳಗಳನ್ನು ರಚಿಸಲಾಗುವುದು. ಕೊಠಡಿ ಮೇಲ್ವಿಚಾರಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮೊಬೈಲ್ ಫೋನ್, ಎಲೆಕ್ಟ್ರಾನಿಕ್ ಸಾಧನಗಳನ್ನು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಿದ್ದಲಿಂಗಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಉಮೇಶ್, ಡಿಡಿಪಿಐ ಎಸ್.ಟಿ.ಜವರೇಗೌಡ ಇದ್ದರು.