

ಹುಣಸೂರು: ತಾಲೂಕಿನ ಗಾವಡಗೆರೆಯ ಶ್ರೀ ಗುರುಲಿಂಗಜಂಗಮದೇವರ ಮಠದಿಂದ 9ನೇ ವರ್ಷದ ಮಲೆ ಮಹದೇಶ್ವರ ಬೆಟ್ಟದೆಡೆಗೆ ಪಾದಯಾತ್ರೆ ಕಾರ್ಯಕ್ರಮ ಡಿ.30ರಂದು ಆರಂಭಗೊಂಡು ಜ.5ರಂದು ಸಂಪನ್ನಗೊಳ್ಳಲಿದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಶಿಲ್ಪಾ ಮಂಜುನಾಥ್ ತಿಳಿಸಿದರು.
8 ವರ್ಷಗಳಿಂದ ಮಠದ ಗುರುಗಳಾದ ಶ್ರೀ ನಟರಾಜ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ಆಯೋಜಿಸಲಾಗುತ್ತಿದೆ. 8 ವರ್ಷಗಳ ಹಿಂದೆ 35 ಜನರ ಸಹಯೋಗದಲ್ಲಿ ಆರಂಭಗೊಂಡ ಪಾದಯಾತ್ರೆ ಇದೀಗ 3-4 ಸಾವಿರ ಭಕ್ತರ ಪಾಲ್ಗೊಳ್ಳುವಿಕೆ ಮೂಲಕ ಮುಂದುವರಿದಿದೆ. ಡಿ.30ರಂದು ಬೆಳಗ್ಗೆ ಶ್ರೀ ಮಠದಲ್ಲಿ ಪೂಜಾ ಕೈಂಕರ್ಯ ನೆರವೇರಿದ ನಂತರ ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಾದಯಾತ್ರೆ ವೇಳೆ ಸ್ಥಳೀಯ ಜನರಿಗೆ ತಿಳಿ ಹೇಳುವ ಮೂಲಕ ಶ್ರೀಗಳು ಎಲ್ಲರನ್ನೂ ಒಗ್ಗೂಡಿಸುತ್ತಾರೆ. ಅಲ್ಲದೆ ಈ ಬಾರಿ ಪಾದಯಾತ್ರೆಯುದ್ದಕ್ಕೂ ಪರಿಸರ ಸಂರಕ್ಷಣೆ, ಸ್ವಚ್ಛತೆ ಕಾಪಾಡಿಕೊಳ್ಳುವ ಕುರಿತು ಅರಿವು ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀ ಮಠದ ಮಲ್ಲೇಶ್, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಎಚ್.ಸಿ.ಮಂಜುನಾಥ್ ಮತ್ತು ಕಣಗಾಲು ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿದ್ದರು.
ಸಾಗುವ ದಾರಿ: ಡಿ.30ರಂದು ಗಾವಡಗೆರೆ ಶ್ರೀಮಠದಿಂದ ಹೊರಟು ಕೆ.ಆರ್.ನಗರದ ಮೂಲಕ ಲಾಲ ದೇವನಹಳ್ಳಿ ತಲುಪಲಿದೆ. ರಾತ್ರಿ ಲಾಲದೇವನಹಳ್ಳಿಯಲ್ಲಿ ವಿರಾಮವಿರಲಿದೆ. 31ರಂದು ಬೆಳಗ್ಗೆ ಹೊರಟು ಮೈಸೂರಿನ ಸಿದ್ಧಾರ್ಥ ಲೇಔಟ್‌ನ ಕನಕಭವನ ತಲುಪಲಾಗುವುದು. ಜ.1ರಂದು ತಿ.ನರಸೀಪುರ ಜೆಎಸ್‌ಎಸ್ ಕಲ್ಯಾಣಮಂಟಪದಲ್ಲಿ ರಾತ್ರಿ ಕಳೆದು, ಬೆಳಗ್ಗೆ ಅಲ್ಲಿಂದ ಹೊರಟು ಜ.2ರಂದು ಕೊಳ್ಳೇಗಾಲದ ಜೆ.ಎಸ್.ಎಸ್ ಹಾಸ್ಟೆಲ್‌ನಲ್ಲಿ ತಂಗಲಾಗುವುದು. ಜ.3ರಂದು ಹನೂರಿನ ಗೌರಿಶಂಕರ ಕಲ್ಯಾಣ ಮಂಟಪದಲ್ಲಿದ್ದು, ಜ.4ರಂದು ತಾಳುಬೆಟ್ಟ ತಲುಪಲಾಗುವುದು. ತಾಳುಬೆಟ್ಟದಿಂದ ಡಿ.5ರ ಬೆಳಗ್ಗೆ ಹೊರಟು ಮಲೆಮಹದೇಶ್ವರ ಬೆಟ್ಟ ತಲುಪಲಾಗುತ್ತದೆ