

ಮಂಗಳೂರು: ಮೊಬೈಲ್ ಬಳಸುವುದಕ್ಕೆ ತಾಯಿ ಗದರಿಸಿದರೆಂದು ಬೇಸತ್ತು ಮನೆಯ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದು 9 ನೇ ತರಗತಿ ವಿದ್ಯಾರ್ಥಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪದವು ಕೋಟಿಮುರ ರೆಡ್ ಬ್ರಿಕ್ಸ್ ಅಪಾರ್ಟ್‌ಮೆಂಟ್ ನಿವಾಸಿ
ಜ್ಞಾನೇಶ್ ( 14 ವರ್ಷ) ಮೃತ ಬಾಲಕ.
ಪ್ರಕರಣದ ವಿವರ:
ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದವು ಬಿ ಗ್ರಾಮದ ಕೋಟಿಮುರದಲ್ಲಿರುವ ರೆಡ್ ಬ್ರಿಕ್ಸ್ ಅಪಾರ್ಟ್ಮೆಂಟ್ ನಲ್ಲಿ ಜಗದೀಶ್ ಹಾಗೂ ವಿನಯ ದಂಪತಿಗಳ ಮಗನಾದ ಜ್ಞಾನೇಶ್ ಎಂಬಾತ ಬಾಲಕನು ತುಂಟನಾಗಿದ್ದು ಮೊಬೈಲ್ ಬಳಸುವ ವಿಚಾರವಾಗಿ ಮನೆಯಲ್ಲಿ ತಾಯಿಯವರು ಸ್ವಲ್ಪ ಗದರಿಸಿದರು ಎಂಬ ಕಾರಣಕ್ಕೆ ಬೇಸರದಲ್ಲಿದ್ದ. ನಂತರ ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋದವನು ಬಾರದಿದ್ದಾಗ ತಂದೆ ಜಗದೀಶ್ ರವರು ಬಾತ್ರೂಮ್ ಬಳಿಯಿರುವ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕನು ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಇರುದನ್ನು ಗಮನಿಸಿದ್ದಾರೆ. ಕೂಡಲೇ ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಬಾಲಕ ಮೃತಪಟ್ಟಿದ್ದ.