ಯುವರಾಜ(ಸ್ವಾಯತ್ತ) ಕಾಲೇಜಿನ 9ನೇ ಪದವಿ ಪ್ರದಾನ ಸಮಾರಂಭ

5
Published on

ಮೈಸೂರು: ವಿಜ್ಞಾನವು ಪರೋಕ್ಷವಾಗಿ ಸಮಾಜದ ಎಲ್ಲರ ಜೀನವದ ಮೇಲೂ ಪ್ರಭಾವ ಬೀರುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಅಣ್ವಿಕ ಜೈವಿಕ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ಎಂ.ಆರ್.ಎನ್.ಮೂರ್ತಿ ಹೇಳಿದರು.

ನಗರದ ಯುವರಾಜ(ಸ್ವಾಯತ್ತ) ಕಾಲೇಜಿನ ಅಮೃತ ಮಹೋತ್ಸವ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾಲೇಜಿನ 9ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಪ್ರಸ್ತುತ ಜಗತ್ತಿನಲ್ಲಿ ಅದ್ಭುತವಾದ ಹೊಸ ಆವಿಷ್ಕಾರಗಳನ್ನು ಮಾಡಲಾಗುತ್ತಿದೆ. ಹೊಸ ತಂತ್ರಜ್ಞಾನಗಳನ್ನು ಪ್ರತಿದಿನ ಪರಿಚಯಿಸಲಾಗುತ್ತಿದೆ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕನ್ನಡ ಮಾಧ್ಯಮದ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಪೂರ್ಣಗೊಳಿಸುತ್ತಿದ್ದರು. ಈ ಶಾಲೆಗಳಲ್ಲಿ ಸಾಕಷ್ಟು ಸಂಖ್ಯೆಯ ಶಿಕ್ಷಕರ ಕೊರತೆಯಿಂದಾಗಿ ಗುಣಮಟ್ಟದ ಶಿಕ್ಷಣ ನೀಡಲು ವಿಫಲವಾಗಿದೆ. ಬಹುತೇಕ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಗೃಹ ವ್ಯವಸ್ಥೆ ಇಲ್ಲ ಎಂದರು.

862 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ಪದವಿಯಲ್ಲಿ ಬಿಎಸ್ಸಿ-581, ಬಿಸಿಎ-54, ಬಿಬಿಎ-23 ಹಾಗೂ ಸ್ನಾತಕೋತ್ತರ ಪದವಿಯ ರಸಾಯನಶಾಸ್ತ್ರ 35, ಸಸ್ಯಶಾಸ್ತ್ರ 27, ಗಣಿತಶಾಸ್ತ್ರ 47, ಭೌತಶಾಸ್ತ್ರ 14, ಆಹಾರ ವಿಜ್ಞಾನ ಮತ್ತು ಪೌಷ್ಟಿಕತೆ 26, ಅಣು ಜೀವಾಣು ಶಾಸ್ತ್ರ 22 ಮತ್ತು ಎಂಬಿಎ 33 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಈ ಪೈಕಿ 11 ಮಂದಿ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು.

ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಕಾಲೇಜಿನ ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಕೆ.ಅಜಯಕುಮಾರ್, ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಆಡಳಿತ ಅಧಿಕಾರಿ ಪ್ರೊ.ಮಹೇಶ್, ಪ್ರಾಧ್ಯಾಪಕರಾದ ಪ್ರೊ.ಶ್ರೀನಿವಾಸನ್, ಪ್ರೊ.ವೆಂಕಟೇಶ್, ಪ್ರೊ.ಯಶೋದಾ ನಂಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net