

ಶಿವಮೊಗ್ಗ: ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ತಾಯಿ-ಮಗು ಇಬ್ಬರನ್ನೂ ದಾಖಲಿಸಲಾಗಿದೆ.
ನಗರ ಹೊರವಲಯದ 15 ವರ್ಷದ ಅಪ್ರಾಪ್ತೆ 7 ತಿಂಗಳಿನ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೊಟ್ಟೆ ನೋವಿನ ನೆಪವೊಡ್ಡಿ ಶಾಲೆಗೆ ರಜೆ ಹಾಕಿದ್ದ ಬಾಲಕಿ ಎರಡು ದಿನ ಮನೆಯಲ್ಲೇ ಇದ್ದಳು. ಬಳಿಕ ಹೊಟ್ಟೆ ನೋವು ತೀವ್ರಗೊಂಡಿದ್ದು ಮನೆಯಲ್ಲೇ ಹೆರಿಗೆ ಆಗಿದೆ.
ತಂದೆ-ತಾಯಿ ಕೂಲಿ ಕೆಲಸ ಮಾಡಿಕೊಂಡಿದ್ದು, ಅಪ್ರಾಪ್ತೆ ಸೇರಿ ನಾಲ್ವರು ಮಕ್ಕಳಿದ್ದಾರೆ. ಹೆರಿಗೆ ಆದ ಕುಟುಂಬಸ್ಥರು ಮೆಗ್ಗಾನ್‌ಗೆ ದಾಖಲು ಮಾಡಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು 1.8 ಕೆ.ಜಿ ತೂಕವಿದ್ದು, ಯಾವುದೇ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ ಎನ್ನಲಾಗಿದೆ.
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸರು ಅಲರ್ಟ್ ಆಗಿದ್ದಾರೆ. ಘಟನೆ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯವರು ಬಾಲಕಿಯ ವಿಚಾರಣೆ ನಡೆಸಿದ್ದಾರೆ. ತಾಯಿ ಆಗುವುದಕ್ಕೆ ಕಾರಣ ಯಾರೆಂಬ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಬಾಲಕಿ ಗೊಂದಲದ ಹೇಳಿಕೆ ನೀಡುತ್ತಿದ್ದು, ಕೌನ್ಸೆಲಿಂಗ್‌ಗೆ ಒಳಪಡಿಸುವ ಸಾಧ್ಯತೆ ಇದೆ. ವಿನೋಬನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.