ಡಾ.ಎಪಿಜೆ ಅಬ್ದುಲ್ ಕಲಾಂ ಸಂಸ್ಥೆಯಿಂದ 9ನೇ ವರ್ಷದ ಪ್ರಶಸ್ತಿ ಪ್ರದಾನ

RAICHUR
RAICHUR
Published on

ರಾಯಚೂರು ಈ ಹಿಂದೆ ನಕ್ಸಲ್ ಪೀಡಿತ ಗ್ರಾಮವಾಗಿದ್ದ ಯಾಪಲದಿನ್ನಿ ಗ್ರಾಮದಲ್ಲಿ ಸಮಾಜಮುಖಿ ಕಾರ್ಯಗಳನ್ನು ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಕಟ್ಟಿ ನಡೆಸಿಕೊಂಡು ಹೋಗುತ್ತಿರುವ ಸಂಸ್ಥೆಯ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆಂದು ಬ್ರಹ್ಮಕುಮಾರಿ ಈಶ್ವರಿಯಾ ವಿಶ್ವವಿದ್ಯಾಲಯದ ಸಂಚಾಲಕಿ ಸ್ಮಿತಾ ಅಕ್ಕ ಹೇಳಿದರು.

ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸಂಸ್ಥೆಯ 14ನೇ ವಾರ್ಷಿಕೋತ್ಸವ ಹಾಗೂ 9ನೇ ವರ್ಷದ ರಾಜ್ಯ ಮಟ್ಟದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮುಖ್ಯ ವಾಹಿನಿಗೆ ಬಾರದ ರಾಜ್ಯದ ಹಲವು ಕಡೆಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಜಿಲ್ಲೆಗೆ ಕರೆದು, ಪ್ರಶಸ್ತಿ ನೀಡಿ, ಸನ್ಮಾನಿಸುವ ಮೂಲಕ ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಜಿಲ್ಲೆ ಹಾಗೂ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೇರಿಸಿದೆ. ಪರಿಶ್ರಮದಿಂದ ಮಾತ್ರ ಯಶಸ್ಸನ್ನು ಅನುಭವಿಸಬಹುದಾಗಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಕಾರ್ಯದಲ್ಲಿ ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು ಎಂದರು.

ಹಿರಿಯ ಪತ್ರಕರ್ತ ಎ.ಎಸ್.ರಮಾಕಾಂತ ಮಾತನಾಡಿ, ಡಾ.ಎ.ಪಿ.ಜೆ ಅಬ್ದುಲ್ ಕಾಲಾಂ ಎಂಬ ಹೆಸರೇ ಒಂದು ರೀತಿಯ ರೋಮಾಂಚನವಾಗಿದ್ದು, ಕಷ್ಟದಿಂದ ಜೀವನದಲ್ಲಿ ಯಶಸ್ಸನ್ನು ಕಾಣುವ ಪ್ರತಿಯೊಬ್ಬರಿಗೂ ಅಬ್ದುಲ್ ಕಲಾಂ ಮಾದರಿಯಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಸಮಾಜಕ್ಕೆ ಕೊಡುಗೆ ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಂತಸದ ವಿಚಾರವಾಗಿದೆ ಎಂದರು.

ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 12 ಜನರಿಗೆ ರಾಜ್ಯಮಟ್ಟದ ಡಾ.ಎಪಿಜೆ ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಸಿಪಿಐ ಉಮೇಶ ಕಾಂಬ್ಳೆ, ಈಶ್ವರಿಯಾ ವಿಶ್ವವಿದ್ಯಾಲಯದ ಸಂಚಾಲಕಿ ಶಾರದಾ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ನಂದಿತಾ, ರಾಜಶೇಖರ ಸಾಹುಕಾರ, ರವಿಕುಮಾರ ಗೋನಾಳ, ಕಲಾಂ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಉಪಾಧ್ಯಕ್ಷ ತಿರುಮಲರೆಡ್ಡಿ, ಹಿಂದೂ ಪ್ರತಿಷ್ಠಾನದ ಸಂಚಾಲಕ ಭೀಮರಾವ್ ದೇಶಪಾಂಡೆ, ವೆಂಕಟರೆಡ್ಡಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net